ಕ್ವಾಲಿಟಿ ಮಾರ್ಕ್‌ನೊಂದಿಗೆ ನಂದಿನಿ ಉತ್ಪನ್ನ ಮಾರುಕಟ್ಟೆಗೆ
ಮಂಗಳೂರು, . 11: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಪ್ರತಿಷ್ಠಿತ ಕ್ವಾಲಿಟಿ ಮಾರ್ಕ್ ಲೋಗೊದೊಂದಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹೊರತಂದಿದ್ದು ಇದರ ಬಿಡುಗಡೆ ಸಮಾರಂಭ ಬುಧವಾರ ನಗರದಲ್ಲಿ ನಡೆಯಿತು.
ಕ್ವಾಲಿಟಿ ಮಾರ್ಕ್‌ನೊಂದಿಗೆ ನಂದಿನಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಕೆಎಂಎಫ್ ಕ್ವಾಲಿಟಿ ಮಾರ್ಕ್‌ನ್ನು ಪಡೆಯುವ ಮೂಲಕ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಂಡಿದೆ. ಹಾಲು ಉತ್ಪಾದನೆಯ ಮೂಲಕ ದೇಶ ಸ್ವಾವಲಂಬನೆ ಸಾಧಿಸಿದೆ. ಕೆಎಂಎಫ್ ಮೂಲಕ ರೈತರಿಗೆ ಹಾಗೂ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಿದೆ. ರೈತರು ಆರ್ಥಿಕವಾಗಿ ಪ್ರಗತಿ ಕಂಡರೆ, ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳು ದೊರೆತಿವೆ ಎಂದು ಹೇಳಿದರು.
ಕ್ವಾಲಿಟಿ ಮಾರ್ಕ್ ಬಗ್ಗೆ ಮಾಹಿತಿ ನೀಡಿದ ಬಿ.ನಟರಾಜ್, ದೇಶದಲ್ಲಿ 21 ಡೇರಿಗಳಿಗೆ ಮಾತ್ರ ಈ ಕ್ವಾಲಿಟಿ ಮಾರ್ಕ್ ದೊರೆತಿದೆ. ಕರ್ನಾಟಕದಲ್ಲಿ 11 ಜಿಲ್ಲೆಗಳಿಗೆ ದೊರೆತಿದೆ. ಇದರಲ್ಲಿ ಉಡುಪಿ ಮತುತಿ ದ.ಕ.ಕ್ಕೂ ಈ ಸ್ಥಾನ ಲಭಿಸಿರುವುದು ಹೆಮ್ಮೆ ವಿಚಾರ ಎಂದರು.ಇದೇ ಸಂದರ್ಭ ಕ್ವಾಲಿಟಿ ಬೋರ್ಡ್‌ನ ಸೀನಿಯರ್‌ಮ್ಯಾನೇಜರ್ ಸುರೇಶ್ ಜಯ ಸಿಂಘಾನಿ, ಕ್ವಾಲಿಟಿ ಮಾರ್ಕ್‌ನ ಪ್ರಮಾಣ ಪತ್ರವನ್ನು ಕೆಎಂಎಫ್ ಅಧ್ಯಕ್ಷ ಕೆ.ರವಿರಾಜ ಹೆಗ್ಡೆಯವರಿಗೆ ಹಸ್ತಾಂತರಿಸಿದರು.
ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ. ಸಲೀಂ ಮತ್ತು ಕೆಎಂಎಫ್ ನಿರ್ದೇಶಕರು ಉಪಸ್ಥಿತರಿದ್ದರು.ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಸವಣೂರು ಸೀತಾರಾಮ ರೈ ಸ್ವಾಗತಿಸಿದರು.