ಉಡುಪಿ: ಅ. 13ರಂದು ವಲಸೆ ಕಾರ್ಮಿಕರ ಸಮಾವೇಶ
ಉಡುಪಿ, ಅ.11: ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ವಲಸೆ ಕಾರ್ಮಿಕರ ಸಂಘವು ಪರ್ಯಾಯ ಪೇಜಾವರ ಮಠ ಹಾಗೂ ದಿ ಕನ್ಸರ್ನ್ ಫಾರ್ ವರ್ಕಿಂಗ್ ಚಿಲ್ಡ್ರನ್ಸ್ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ವಲಸೆ ಕಾರ್ಮಿಕರ ಸಮಾವೇಶ-2017ನ್ನು ಅ.13ರ ಶುಕ್ರವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಅದರಲ್ಲೂ ಪ್ರಮುಖವಾಗಿ ಉತ್ತರ ಕರ್ನಾಟಕದಿಂದ ಜೀವನೋಪಾಯಕ್ಕಾಗಿ ಕುಟುಂಬ ಸಮೇತರಾಗಿ ವಲಸೆ ಬಂದಿರುವ ಕುಟುಂಬಗಳು ಇಲ್ಲಿ ಮೂಲಭೂತ ಸಮಸ್ಯೆ, ರಕ್ಷಣೆ, ಶಿಕ್ಷಣ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತಿದ್ದು, ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತಿದ್ದಾರೆ.
ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿರುವ ಇವರೆಲ್ಲರೂ ಸೇರಿ ತಮ್ಮ ಸಮಸ್ಯೆಗಳತ್ತ ಜಿಲ್ಲಾಡಳಿತದ ಹಾಗೂ ರಾಜ್ಯ ಸರಕಾರದ ಗಮನ ಸೆಳೆಯಲು ಸಂಘಟಿತರಾಗಿ ಈ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಸಂಗಪ್ಪ ತಿಳಿಸಿದ್ದಾರೆ.
ಶುಕ್ರವಾರ 10:30ಕ್ಕೆ ಆರಂಭಗೊಳ್ಳುವ ಸಮಾವೇಶಕ್ಕೆ ಪೂರ್ವಭಾವಿಯಾಗಿ ಬೆಳಗ್ಗೆ 9ಗಂಟೆಗೆ ಚಿತ್ತರಂಜನ್ ಸರ್ಕಲ್‌ನಿಂದ ರಾಜಾಂಗಣದವರೆಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶವನ್ನು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್, ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಂಸದೆ ಶೋಭಾ ಕರಂದ್ಲಾಜೆ, ಕಾಪು ಶಾಸಕ ವಿನಯ ಕುಮಾರ್ ಸೊರಕೆ, ಜಿಪಂ ಅದ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಹಾಯಕ ಆಯುಕ್ತೆ ಶಿಲ್ಪಾ ನಾಗ್, ಸಿಇಒ ಶಿವಾನಂದ ಕಾಪಸಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ವುುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಸಮಾವೇಶದ ಮೂಲಕ ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆ ಗಳತ್ತ ಸಂಬಂಧಿತ ಗಮನ ಸೆಳೆದು ಅಗತ್ಯ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ಹೊಂದಿರುವುದಾಗಿ ಸಂಗಪ್ಪ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.