ವಿಯೆಟ್ನಾಂನಲ್ಲಿ ಚಂಡಮಾರುತ: 37 ಸಾವು

Update: 2017-10-12 16:04 GMT

ಹನೋಯ್ (ವಿಯೆಟ್ನಾಂ), ಅ. 12: ವಿಯೆಟ್ನಾಂನ ಉತ್ತರ ಮತ್ತು ಮಧ್ಯ ಭಾಗಕ್ಕೆ ಚಂಡಮಾರುತ ಅಪ್ಪಳಿಸಿದ್ದು, ಕನಿಷ್ಠ 37 ಮಂದಿ ಮೃತಪಟ್ಟಿದ್ದಾರೆ ಹಾಗೂ 40 ಮಂದಿ ನಾಪತ್ತೆಯಾಗಿದ್ದಾರೆ.

ಪ್ರವಾಹ ಮತ್ತು ಭೂಕುಸಿತದಿಂದಾಗಿ ಹಲವು ಮನೆಗಳು ನಾಶವಾಗಿವೆ ಹಾಗೂ ಬೆಳೆಗಳು ಕೊಚ್ಚಿಕೊಂಡು ಹೋಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಪ್ರಾಕೃತಿಕ ಅನಾಹುತದಿಂದಾಗಿ ಮಧ್ಯ ಮತ್ತು ಉತ್ತರದ ಆರು ಪ್ರಾಂತಗಳಲ್ಲಿ 21 ಮಂದಿ ಗಾಯಗೊಂಡಿದ್ದಾರೆ ಹಾಗೂ 1,000ಕ್ಕೂ ಅಧಿಕ ಮನೆಗಳು ಹಾನಿಗೀಡಾಗಿವೆ. ಈ ಪ್ರದೇಶಗಳಲ್ಲಿ ಇನ್ನೂ 16,740 ಮನೆಗಳು ಜಲಾವೃತವಾಗಿವೆ ಹಾಗೂ ಮೂಲಸೌಕರ್ಯಗಳು ಮತ್ತು ಬೆಳೆಗಳಿಗೆ ಹಾನಿಯಾಗಿವೆ ಎಂದು ವಿಯೆಟ್ನಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ ಗುರುವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಚಂಡಮಾರುತದ ಹೆಚ್ಚಿನ ಪ್ರಕೋಪಕ್ಕೆ ಒಳಗಾದ ಹೋ ಬಿನ್ಹ್ ಪ್ರಾಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 21 ಮಂದಿ ನಾಪತ್ತೆಯಾಗಿದ್ದಾರೆ. ಗುರುವಾರ ಮುಂಜಾನೆ ಭೂಕುಸಿತ ಸಂಭವಿಸಿದಾಗ ನಾಲ್ಕು ಕುಟುಂಬಗಳ ಸದಸ್ಯರು ಮಲಗಿದಲ್ಲಿಯೇ ಭೂಸಮಾಧಿಯಾದರು.

ಉತ್ತರದ ನಿನ್ಹ್ ಬಿನ್ಹ್ ಪ್ರಾಂತದಲ್ಲಿ 2 ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸುವಂತೆ ಆದೇಶ ನೀಡಲಾಗಿದೆ.

ವಾಯುಭಾರ ಕುಸಿತದಿಂದಾಗಿ ಮಧ್ಯ ವಿಯೆಟ್ನಾಂನಲ್ಲಿ ಮಂಗಳವಾರದಿಂದ ಭಾರೀ ಮಳೆಯಾಗುತ್ತಿದೆ.

ವಿಯೆಟ್ನಾಂನಲ್ಲಿ ಪ್ರವಾಹ ಮತ್ತು ಬಿರುಗಾಳಿ ಸಾಮಾನ್ಯವಾಗಿದೆ. ಇದರಿಂದಾಗಿ ಇಲ್ಲಿ ಪ್ರತಿ ವರ್ಷ ನೂರಾರು ಮಂದಿ ಸಾಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News