×
Ad

ಕನ್ನಡ ರಾಜ್ಯೋತ್ಸವ: ನಾಡು ನುಡಿ ವೈಭವ ಮೂಡಿಸಲು ಕರೆ

Update: 2017-10-13 21:30 IST

ಮಂಗಳೂರು, ಅ.13: ಈ ಬಾರಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಾರ್ವಜನಿಕರು ನಾಡಿನ ಸಂಸ್ಕೃತಿ ಹಾಗೂ ನುಡಿಯ ವೈಭವ ಪ್ರತಿಬಿಂಬಿಸುವಂತೆ ಆಚರಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಕರೆ ನೀಡಿದ್ದಾರೆ.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ರಾಜ್ಯೋತ್ಸವ ಕಾರ್ಯಕ್ರಮವು ಕೇವಲ ಸಾಂಕೇತಿಕವಾಗಿರದೆ, ನುಡಿ ಹಾಗೂ ನೆಲದ ಸಂಸ್ಕೃತಿಯು ನಮ್ಮಲ್ಲಿ ಸಮ್ಮಿಲನವಾಗಿ ವ್ಯಕ್ತವಾಗಬೇಕು. ಈ ನಿಟ್ಟಿನಲ್ಲಿ ನಾಗರಿಕರು ಸಕ್ರಿಯವಾಗಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಕರೆ ನೀಡಿದರು.

ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ನವೆಂಬರ್ 1ರಂದು ನೆಹರು ಮೈದಾನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ. ಪಥಸಂಚಲನ ಬಳಿಕ, ಸುಮಾರು 700ಕ್ಕೂ ಮಿಕ್ಕಿ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ ಪುರಭವನದಲ್ಲೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ನವೆಂಬರ್ 1ರಂದು ಬೆಳಗ್ಗೆ ನಗರದ ಜ್ಯೋತಿ ಅಂಬೇಡ್ಕರ್ ವೃತ್ತದಿಂದ ನೆಹರು ಮೈದಾನದವರೆಗೆ ರಾಜ್ಯೋತ್ಸವ ಮೆರವಣಿಗೆ ನಡೆಯಲಿದೆ. ಇದರಲ್ಲಿ ವಿದ್ಯಾರ್ಥಿಗಳು, ಕನ್ನಡ ಅಭಿಮಾನಿಗಳು ಭಾಗವಹಿಸಲಿದ್ದಾರೆ.

ಮೆರವಣಿಗೆಯಲ್ಲಿ ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿಕ್ಷಣ ಇಲಾಖೆ, ಪ್ರವಾಸೋದ್ಯಮ, ಸಾರ್ವಜನಿಕ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ತೋಟಗಾರಿಕೆ, ಅರಣ್ಯ ಇಲಾಖೆ, ತುಳು ಅಕಾಡೆಮಿ ಸೇರಿದಂತೆ ವಿವಿಧ ಇಲಾಖೆಗಳ ಆಕರ್ಷಕ ಟ್ಯಾಬ್ಲೋಗಳು ಭಾಗವಹಿಸಲಿವೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಕರ್ನಾಟಕ ತುಳು ಅಕಾಡು ಅಧ್ಯಕ್ಷ ಎ.ಸಿ.ಭಂಡಾರಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಭಾರತ್ ಸೇವಾದಳ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News