ತಲ್ವಾರ್ ದಂಪತಿ ಇನ್ನೂ ಜೈಲಿನಲ್ಲಿ !
ಗಾಜಿಯಾಬಾದ್, ಅ.13: ತಮ್ಮ ಪುತ್ರಿ ಅರುಷಿ ಹಾಗೂ ಮನೆಕೆಲಸದಾಳು ಹೇಮರಾಜ್ ಕೊಲೆ ಪ್ರಕರಣದಲ್ಲಿ ದಂತವೈದ್ಯ ದಂಪತಿ ನೂಪುರ್ ಹಾಗೂ ರಾಜೇಶ್ ತಲ್ವಾರ್ ಅವರನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ದೋಷಮುಕ್ತಿಗೊಳಿಸಿದ್ದರೂ, ತೀರ್ಪಿನ ಪ್ರತಿ ಕಾರಾಗೃಹದ ಅಧಿಕಾರಿಗಳ ಇನ್ನೂ ಕೈಸೇರದಿರುವ ಕಾರಣ ಶುಕ್ರವಾರವೂ ಅವರ ಬಿಡುಗಡೆಯಾಗಿಲ್ಲ. ಶನಿವಾರ ಹಾಗೂ ರವಿವಾರ ಅಧಿಕೃತ ರಜೆಯಿರುವುದರಿಂದ ತಲ್ವಾರ್ ದಂಪತಿ ಸೋಮವಾರದವರೆಗೆ ಜೈಲಿನಲ್ಲಿ ಉಳಿದುಕೊಳ್ಳ ಬೇಕಾಗುತ್ತದೆಯೆಂದು, ಅವರನ್ನು ಇರಿಸಲಾದ ಉತ್ತರಪ್ರದೇಶದ ಧಸ್ನಾ ಜೈಲಿನ ಅಧಿಕಾರಿ ದಧಿರಾಮ್ ವೌರ್ಯ ತಿಳಿಸಿದ್ದಾರೆ.
ತಲ್ವಾರ್ ದಂಪತಿ ತಮ್ಮ ಪುತ್ರಿ ಹಾಗೂ ಸಹಾಯಕ ಹೇಮರಾಜ್‌ನನ್ನು ಕೊಲೆಗೈದಿದ್ದಾರೆಂಬುದಕ್ಕೆ ಸಮರ್ಥವಾದ ಸಾಕ್ಷಾಧಾರಗಳನ್ನು ಒದಗಿಸಲು ಸಿಬಿಐ ವಿಫಲವಾಗಿರುವುದರಿಂದ, ಸಂದೇಹದ ಲಾಭದ ಆಧಾರದಲ್ಲಿ ಅವರನ್ನು ಅಲಹಾಬಾದ್ ಹೈಕೋರ್ಟ್ ಗುರುವಾರ ಖುಲಾಸೆಗೊಳಿಸಿತ್ತು.
2008ರಲ್ಲಿ ದಿಲ್ಲಿ ಸಮೀಪದ ನೊಯ್ಡದಲ್ಲಿರುವ ತಲ್ವಾರ್ ದಂಪತಿಯ ನಿವಾಸದಲ್ಲಿ ಅವರ ಪುತ್ರಿ ಅರುಷಿಯ ಮೃತದೇಹ ಕತ್ತುಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರ ಮನೆಗೆಲಸದ ಸಹಾಯಕ ಹೇಮರಾಜ್‌ನ ಶವ ಕಟ್ಟಡದ ತಾರಸಿಯಲ್ಲಿ ಮಾರನೆಯ ದಿನ ದೊರೆತಿತ್ತು.
ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲ್ವಾರ್ ದಂಪತಿ ಹಲವಾರು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. 2015ರಲ್ಲಿ ಈ ಪ್ರಕರಣಕ್ಕೆ ಕೆಳನ್ಯಾಯಾಲಯವು ರಾಜೇಶ್ ಹಾಗೂ ನೂಪುರ್ ತಲ್ವಾರ್‌ಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿತ್ತು. ಆನಂತರ ಅವರು ತೀರ್ಪಿನ ವಿರುದ್ಧ ಅಲಹಾಬಾದ್ ಹೈಕೋರ್ಟ್‌ನ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಈ ಎರಡು ಕೊಲೆಗಳನ್ನು ತಲ್ವಾರ್ ದಂಪತಿ ಎಸಗಿದ್ದಾರೆಂಬುದಕ್ಕೆ ಸಮರ್ಥವಾದ ಸಾಕ್ಷಾಧಾರಗಳನ್ನು ನೀಡಲು ಸಿಬಿಐ ವಿಫಲವಾಗಿದೆ ಎಂದು ಅಭಿಪ್ರಾಯಿಸಿತ್ತು ಹಾಗೂ ಸಂದೇಹದ ಲಾಭ ನೀಡಿ, ತಲ್ವಾರ್ ದಂಪತಿಯನ್ನು ಖುಲಾಸೆಗೊಳಿಸಿತ್ತು.
ಈ ಮಧ್ಯೆ ಸಿಬಿಐ ಹೇಳಿಕೆಯೊಂದನ್ನು ನೀಡಿ, ಅಲಹಾಬಾದ್ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸುವ ಮೊದಲು ತಾನು ತೀರ್ಪನ್ನು ಅಧ್ಯಯನ ಮಾಡುವುದಾಗಿ ತಿಳಿಸಿದೆ.