ರೊಹಿಂಗ್ಯಾ ನಿಗ್ರಹ ಕಾರ್ಯಾಚರಣೆಯಲ್ಲಿ ಸೈನಿಕರ ವರ್ತನೆ ಬಗ್ಗೆ ತನಿಖೆ: ಮ್ಯಾನ್ಮಾರ್ ಸೇನೆ

Update: 2017-10-13 17:15 GMT

ಯಾಂಗನ್ (ಮ್ಯಾನ್ಮಾರ್), ಅ. 13: ರೊಹಿಂಗ್ಯಾ ಬಂಡುಕೋರರ ವಿರುದ್ಧದ ಕಾರ್ಯಾಚರಣೆಯ ವೇಳೆ ಸೈನಿಕರು ರೊಹಿಂಗ್ಯಾ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪಗಳ ಬಗ್ಗೆ ಆಂತರಿಕ ವಿಚಾರಣೆ ನಡೆಸಲಾಗುತ್ತಿದೆ ಎಂದು ಮ್ಯಾನ್ಮಾರ್ ಸೇನೆ ಹೇಳಿದೆ.

ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ 5 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಸೈನಿಕರು ನಡೆಸಿದ ಹತ್ಯೆಗಳು, ಅತ್ಯಾಚಾರಗಳು ಮತ್ತು ಅವರು ಮನೆಗಳಿಗೆ ಬೆಂಕಿ ಕೊಟ್ಟಿರುವುದನ್ನು ತಾವು ನೋಡಿದ್ದೇವೆ ಎಂಬುದಾಗಿ ಹೆಚ್ಚಿನ ನಿರಾಶ್ರಿತರು ಹೇಳಿದ್ದಾರೆ.

ಆಗಸ್ಟ್ 25ರಂದು ರೊಹಿಂಗ್ಯಾ ಬಂಡುಕೋರರು 30 ಭದ್ರತಾ ಠಾಣೆಗಳ ಮೇಲೆ ಸಂಘಟಿತ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಸೇನೆಯು ಮುಸ್ಲಿಮ್ ಬಾಹುಳ್ಯದ ಉತ್ತರದ ರಖೈನ್ ರಾಜ್ಯದಲ್ಲಿ ಉಗ್ರ ದಮನ ಕಾರ್ಯಾಚರಣೆ ನಡೆಸಿತ್ತು.

ಸೇನೆ ನಡೆಸಿರುವ ಹತ್ಯಾಕಾಂಡ ‘ಜನಾಂಗೀಯ ನಿರ್ಮೂಲನೆ’ಯಾಗಿದೆ ಎಂದು ವಿಶ್ವಸಂಸ್ಥೆ ಬಣ್ಣಿಸಿದೆ.

ಸೇನಾ ಸಿಬ್ಬಂದಿಯ ವರ್ತನೆ ಬಗ್ಗೆ ಲೆಫ್ಟಿನೆಂಟ್ ಜನರಲ್ ಆಯೆ ವಿನ್ ನೇತೃತ್ವದ ಸಮಿತಿಯೊಂದು ತನಿಖೆ ಆರಂಭಿಸಿದೆ ಎಂದು ಸೇನಾ ಮುಖ್ಯಸ್ಥರ ಕಚೇರಿ ಶುಕ್ರವಾರ ತಿಳಿಸಿದೆ.

ಮ್ಯಾನ್ಮಾರ್‌ನ ಸಂವಿಧಾನದ ಪ್ರಕಾರ ಸೇನಾ ಕಾರ್ಯಾಚರಣೆ ಸಮರ್ಥನೀಯವಾಗಿದೆ ಎಂಬುದಾಗಿಯೂ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News