ಬಿ.ಸಿ.ರೋಡ್: ಸಹಕಾರಿ ಕೃಷಿ, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್: 0.87 ಲಕ್ಷ ರೂ. ನಿವ್ವಳ ಲಾಭ
ಬಂಟ್ವಾಳ, ಅ. 13: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2016-17ನೆ ಸಾಲಿನಲ್ಲಿ 0.87 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸುದರ್ಶನ ಜೈನ್ ತಿಳಿಸಿದ್ದಾರೆ.
ಬಿ.ಸಿ.ರೋಡಿನಲ್ಲಿರುವ ಬ್ಯಾಂಕ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ತಾಲೂಕಿನ ರೈತರಿಗೆ ಧೀರ್ಘಾವಧಿ ಹಾಗೂ ಮಧ್ಯಮಾವಧಿ ಸಾಲ ನೀಡುವ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಇದಾಗಿದ್ದು, ಪ್ರಸ್ತುತ 17,385 ಸದಸ್ಯರನ್ನು ಹೊಂದಿರುತ್ತದೆ. 2016-17ರ ಸಾಲಿನಲ್ಲಿ ವಿವಿಧ ಯೋಜನೆಗಳಲ್ಲಿ 1110.62 ಲಕ್ಷ ರೂ. ಸಾಲ ವಿತರಿಸಿದೆ ಎಂದ ಅವರು ತಿಳಿಸಿದರು.
ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ 28.85 ರೂ. ಲಕ್ಷ ಕ್ಷೇಮನಿಧಿ ಮತ್ತು 108.85 ಲಕ್ಷ ರೂ. ಇತರ ನಿಧಿ ಹಾಗೂ 1267.65 ಲಕ್ಷ ರೂ. ಠೇವಣಿಯನ್ನು ಹೊಂದಿದೆ. ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಂದ ಪಡೆದ ಸಾಲ ಹೊರಬಾಕಿ 1606.86 ಲಕ್ಷ ರೂ.ವನ್ನು ಆಗಿದ್ದು, 2017, ಮಾರ್ಚ್ 31ಕ್ಕೆ ಸಂಪೂರ್ಣ ಮರುಪಾವತಿಸಲಾಗಿದೆ ಎಂದರು.
2016-17ನೆ ಸಾಲಿನಲ್ಲಿ 552.44 ಲಕ್ಷ ವಸೂಲಿ ತಗಾದೆ ಹೊಂದಿದ್ದು, ಆ ಪೈಕಿ ರೂ. 436.85 ಲಕ್ಷ ರೂ. ವಸೂಲಿ ಮಾಡಿ ಶೇ. 79.08 ವಸೂಲಿ ಸಾಧನೆ ಮಾಡಿರುತ್ತದೆ. 2016-17ನೆ ಸಾಲಿನಲ್ಲಿ ಉತ್ತಮ ವಸೂಲಾತಿ ಹಾಗೂ ಸಾಲವಿತರಣೆ ಸಾಧನೆಗಾಗಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪ್ರಶಸ್ತಿಯನ್ನು ರಾಜ್ಯ ಬ್ಯಾಂಕಿನಿಂದ ಪಡೆದಿದೆ ಎಂದರು.
ದೀರ್ಘಾವಧಿ ಸಾಲ ವಿತರಣೆ ಅಲ್ಲದೆ ಇತ್ತೀಚೆಗೆ ಆರಂಭಗೊಂಡ ಬ್ಯಾಂಕಿಂಗ್ ವಿಭಾಗದಲ್ಲಿ ನಿಶ್ಚಿತ ಠೇವಣಿ, ಉಳಿತಾಯ ಠೇವಣಿ ಮತ್ತು ನಿತ್ಯ ಭೂ ನಿಧಿ ಠೇವಣಿಗಳನ್ನು ಸಂಗ್ರಹಿಸುವ ಮೂಲಕ ರೈತ ಸದಸ್ಯರಲ್ಲಿ ಉಳಿತಾಯ ಮನೋಭಾವನೆಯನ್ನು ಪ್ರೇರೇಪಿಸಿ, ಈ ವ್ಯವಹಾರದಲ್ಲಿ ಈವರೆಗೆ 23 ಕೋಟಿ ರೂ.ಗೂ ಮಿಕ್ಕಿ ಸಾಲ ನೀಡಿರುತ್ತದೆ ಎಂದರು.
ಮುಂದಿನ ವರ್ಷಗಳಲ್ಲಿ ಬ್ಯಾಂಕ್ ತನ್ನ ಕಾರ್ಯಕ್ಷೇತ್ರಕ್ಕೆ ಒಳಪಡುವ ಬಂಟ್ವಾಳ ತಾಲೂಕಿನ ಎಲ್ಲಾ ಗ್ರಾಮಗಳ ರೈತರನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೊಂದಾಯಿಸಿ, ಬ್ಯಾಂಕಿನಿಂದ ದೊರೆಯುವ ಶೇ.3 ಬಡ್ಡಿದರದ ಕೃಷಿ ಸಾಲ, ಹೈನುಗಾರಿಕೆ ಸಾಲ ದ್ವಿ ಚಕ್ರ ವಾಹನ ಸಾಲ ಹಾಗೂ ಚಿನ್ನಾಭರಣ ಈಡಿನ ಮೇಲೆ ಸಾಲ ಜೊತೆಗೆ ಇತರ ಎಲ್ಲಾ ಯೋಜನೆಗಳಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುವ ಮುಖಾಂತರ ಸದಸ್ಯರ ಕೃಷಿ ಅಭಿವೃದ್ಧಿಗೆ ಶ್ರಮಿಸಲಾಗುವುದು. ಅಭಿವೃದ್ಧಿಗೆ ಪೂರಕಾವಾಗಿ ತರಬೇತಿ ಶಿಬಿರ ಮಾಹಿತಿಗಳನ್ನು ನೀಡಲಾಗುವುದು. ಕೃಷಿಕರ ವಿವಿಧ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು 2017-18ನೇ ಸಾಲಿನಲ್ಲಿ ರೂ.12 ಕೋಟಿ ಸಾಲ ಹಂಚಿಕೆ ಗುರಿ ಇರಿಸಿಕೊಂಡು ಸಾಲ ವಿತರಣೆ ಗುರಿ ತಲುಪಲು ಪ್ರಯತ್ನಿಸಲಾಗುವುದು ಎಂದರು.
ಬ್ಯಾಂಕಿನ ಕೇಂದ್ರ ಕಛೇರಿಯಲ್ಲಿ ಈಗಾಗಲೇ ಇ-ಸ್ಟ್ಯಾಂಪಿಂಗ್ ವ್ಯವಹಾರ ಆರಂಭಿಸಿ ಸಾರ್ವಜನಿಕರಿಗೆ ಶೀಘ್ರ ಇ-ಸ್ಟ್ಯಾಂಪ್ ಸೌಲಭ್ಯ ಕೊಡಲಾಗುತ್ತಿದೆ. ಅಲ್ಲದೆ ಬ್ಯಾಂಕಿನ ಕಾರ್ಯವ್ಯಾಪ್ತಿಯ ಮಾಣಿ ಪೇಟೆಯಲ್ಲಿ ಬ್ಯಾಂಕಿನ ಶಾಖೆಯನ್ನು ತೆರೆದು ಬ್ಯಾಂಕಿನ ಸದಸ್ಯರಿಂದ ಠೇವಣಿಗಳನ್ನು ಸಂಗ್ರಹಿಸಿ ಈ ಯೋಜನೆಯಲ್ಲಿ ಚಿನ್ನಾಭರಣ ಮೇಲಿನ ಸಾಲ ಹಾಗೂ ರೈತರ ಬೇಡಿಕೆಗೆ ಅನುಗುಣವಾಗಿ ವಿವಿಧ ಯೋಜನೆಗಳಲ್ಲಿ ಕೃಷಿಯೇತರ ಸಾಲಗಳನ್ನು ವಿತರಿಸಲಾಗುತ್ತಿದೆ ಎಂದು ಜೈನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಸಂಜೀವ ಪೂಜಾರಿ, ನಿರ್ದೇಶಕರಾದ ಹೊನ್ನಪ್ಪ ನಾಯ್ಕ, ಮುರಳೀಧರ ಶೆಟ್ಟಿ, ಚಂದ್ರಹಾಸ ಕರ್ಕೇರ, ರಾಜೇಶ್ ಕುಮಾರ್, ಸುಜಾತ ರೈ, ಪುಷ್ಪಾವತಿ, ಸರಕಾರದ ನಾಮನಿರ್ದೇಶಿತ ಪ್ರಕಾಶ್ ಶೆಟ್ಟಿ ಹಾಗೂ ಪ್ರಭಾರ ವ್ಯವಸ್ಥಾಪಕ ಶೇಖರ ಎಂ. ಉಪಸ್ಥಿತರಿದ್ದರು.