ಪ್ರಧಾನಿ ಮೋದಿ ವಿರುದ್ಧ ಅವಹೇಳಕಾರಿ ಹೇಳಿಕೆ ಸಹಿಸಲು ಸಾಧ್ಯವಿಲ್ಲ: ಸೂಲಿಬೆಲೆ
ಮಂಗಳೂರು, ಅ. 13: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವ ರೋಷನ್ ಬೇಗ್ ಅವಹೇಳಕಾರಿಯಾಗಿ ಮಾತನಾಡಿದ್ದನ್ನು ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಸಾಮೂಹಿಕವಾಗಿ ಜನಜಾಗೃತಿ ಮೂಡಿಸಲು ರಾಜ್ಯಾದ್ಯಂತ ‘ಐ ಆ್ಯಮ್ ಮೋದಿ’ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ನಡೆಸಲಾಗುವುದು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಟೀಕಿಸಲು ಹಕ್ಕು ಇದೆ. ಹಾಗೆಂದು ಕೀಳುಮಟ್ಟದಲ್ಲಿ ನಿಂದಿಸುವುದು ಸರಿಯಲ್ಲ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕೂಡ ನನ್ನ ವಿರುದ್ಧ ಇದೇ ರೀತಿ ಕೀಳುಮಟ್ಟದಲ್ಲಿ ಮಾತ ನಾಡಿದ್ದರು. ಇದನ್ನು ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಅದೇ ಚಾಳಿ ಇತರ ಸಚಿವರಲ್ಲೂ ಮುಂದುವರಿದಿರುವುದು ಖೇದಕರ ಎಂದರು. ಎಲ್ಲರೂ ಜೊತೆ ಸೇರಿ ‘ಐ ಆ್ಯಮ್ ಮೋದಿ’ ಎಂಬ ಜಾಗೃತಿ ಅಭಿಯಾನವನ್ನು ಫೇಸ್‌ಬುಕ್, ವಾಟ್ಸ್‌ಆ್ಯಪ್ ಹಾಗೂ ಟ್ವಿಟರ್‌ಗಳಲ್ಲಿ ನಡೆಸಲಾಗುವುದು. ಶನಿವಾರದಿಂದಲೇ ಈ ಅಭಿಯಾನವನ್ನು ನಡೆಸಲಿದ್ದು, ಇದನ್ನು ರಾಷ್ಟ್ರಾದ್ಯಂತ ಟ್ರೆಂಟ್ ಆಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.
ರೋಷನ್ ಬೇಗ್ ಪ್ರಯೋಗಿಸಿದ ಮಾತನ್ನು ಸಾಮಾನ್ಯರು ಪುನರುಚ್ಚಲಿಸಲೂ ಸಾಧ್ಯವಿಲ್ಲ. ಮೋದಿಗೆ ಅಥವಾ ಮುಖ್ಯಮಂತ್ರಿಗೆ ಬೈದರೆ ಎಲ್ಲರಿಗೆ ಬೈದಂತೆ ಎಂದರು.