ಐದು ತಲೆಮಾರು ಕಂಡ ಐಸುಮ್ಮ: ಗ್ರಾಮದ ಹಿರಿಯಜ್ಜಿಯ ಆಶೀರ್ವಾದ ಪಡೆದ ಶಾಸಕಿ
ಪುತ್ತೂರು, ಅ.14: ಐದು ತಲೆಮಾರು ಕಂಡ ಶತಾಯುಷಿ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಶೇಕಮಲೆ ನಿವಾಸಿ ಐಸುಮ್ಮರನ್ನು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಶನಿವಾರ ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆದುಕೊಂಡರು.
ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ತೆರಳಿದ್ದ ಶಾಸಕಿ ಅವರು ಇದೇ ಗ್ರಾಮದಲ್ಲಿ ವಾಸವಾಗಿರುವ ಗ್ರಾಮದ ಅತ್ಯಂತ ಹಿರಿಯ ಮಹಿಳೆ 101 ವರ್ಷ ಪ್ರಾಯದ ಐಸುಮ್ಮ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಕಣ್ಣು ದೃಷ್ಟಿ ಕಳೆದುಕೊಂಡು ನಡೆದಾಡಲೂ ಸಾಧ್ಯವಾಗದೆ ಇರುವ ಐಸುಮ್ಮ ಅವರ ನೆನಪು ಶಕ್ತಿ ಮತ್ತು ಶ್ರವಣ ಶಕ್ತಿ ಮಾತ್ರ ಮಾಸಿಲ್ಲ. ಶಕುಂತಳಾ ಶೆಟ್ಟಿ ತನ್ನನ್ನು ಭೇಟಿ ಮಾಡಲು ಬಂದ ವಿಷಯ ಗೊತ್ತಾದಾಗ ಬಾರೀ ಸಂತೋಷಗೊಂಡ ಐಸುಮ್ಮ ಅವರು ಶಾಸಕಿಯೊಂದಿಗೆ ಕೆಲ ಕಾಲ ಸಂಭಾಷಣೆ ನಡೆಸಿದರು. ತಾನು ಒಂದು ಬಾರಿಯೂ ಮತದಾನದ ಹಕ್ಕನ್ನು ಚಲಾಯಿಸದೆ ಬಿಟ್ಟಿಲ್ಲ ಎನ್ನತ್ತಾ ಮಾಜಿ ಪ್ರಧಾನಿ ಇಂದಿರಾಗಾಂಧಿಯ ನೆನಪುಗಳನ್ನು ಮೆಲುಕು ಹಾಕಿದರು. ಸ್ಥಳದಲ್ಲಿವರು ಈ ಹಿರಿಯ ಅಜ್ಜಿಯ ನೆನಪು ಶಕ್ತಿಯನ್ನು ಕಂಡು ಬೆರಗಾದರು. ಇಂದಿರಾಗಾಂಧಿ ಬಗ್ಗೆ ನನಗೆ ಅಭಿಮಾನವಿದೆ. ಅವರಿಗೂ ಓಟು ಹಾಕಿದ್ದೆ, ನಿಮಗೂ ಹಾಕಿದ್ದೇನೆ. ನಿಮಗೆ ಒಳ್ಳೆಯದಾಗಲಿ ನೀವು ಮಂತ್ರಿಯಾಗಬೇಕು ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಅವರು ನಾನು ಮಂತ್ರಿಯಾದಲ್ಲಿ ಮೊದಲಿಗೆ ನಿಮ್ಮಲ್ಲಿಗೆ ಬಂದು ಆಶೀರ್ವಾದ ಪಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಐಸುಮ್ಮ ಅವರು ಐದು ತಲೆಮಾರು ಕಂಡ ಗ್ರಾಮದ ಹಿರಿಯ ಮಹಿಳೆಯಾಗಿದ್ದು, ಮತದಾನ ಪ್ರಾರಂಭವಾದ ಬಳಿಕ ಈತನಕ ಒಂದು ಬಾರಿಯೂ ಮತದಾನ ಮಾಡದೆ ಉಳಿದವರಲ್ಲ. ಆರೋಗ್ಯವಾಗಿದ್ದ ಕಾಲದಲ್ಲಿ ನಡೆದುಕೊಂಡೇ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡುತ್ತಿದ್ದ ಅವರು ಇದೀಗ ಕಳೆದ ಕೆಲವು ವರ್ಷಗಳಿಂದ ತನ್ನ ಮೊಮ್ಮಗ ಸಾಮಾಜಿಕ ಕಾರ್ಯಕರ್ತ ಎಸ್.ಪಿ. ಬಶೀರ್ ಅವರ ಸಹಕಾರದಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡುತ್ತಿದ್ದಾರೆ. ಮಲಗಿದ್ದಲ್ಲೇ ಇರುವ ಐಸುಮ್ಮರನ್ನು ಮೊಮ್ಮಗ ಎಸ್ ಪಿ ಬಶೀರ್ ಸ್ವತಹ ಎತ್ತಿಕೊಂಂಡು ಹೋಗಿ ಮತ ಚಲಾಯಿಸುವ ವ್ಯವಸ್ಥೆ ಮಾಡಿಸುತ್ತಾರೆ. ಐಸಮ್ಮ ಅವರು 14 ಮಕ್ಕಳಿದ್ದರು, ಈ ಪೈಕಿ 7 ಮಕ್ಕಳು ಎಳೆ ಪ್ರಾಯದಲ್ಲಿಯೇ ತೀರಿಕೊಂಡಿದ್ದಾರೆ. ಓರ್ವ ಪುತ್ರ ಮತ್ತು ಓರ್ವ ಪುತ್ರಿ ಕಳೆದ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದು, ಇದೀಗ 6 ಮಕ್ಕಳು, 48 ಮೊಮ್ಮಕ್ಕಳು, 82 ಮರಿಮಕ್ಕಳು ಇದ್ದಾರೆ.