ರಾಖ: 24 ಗಂಟೆಯಲ್ಲಿ 100 ಐಸಿಸ್ ಉಗ್ರರು ಶರಣು

Update: 2017-10-14 16:27 GMT

ಸಿರಿಯ, ಅ.14: ರಾಖ ಪಟ್ಟಣದ ಸಂಪೂರ್ಣ ನಿಯಂತ್ರಣಕ್ಕಾಗಿ ಅಮೆರಿಕ ಬೆಂಬಲಿತ ಸಿರಿಯನ್ ಡೆಮಾಕ್ರಟಿಕ್ ಪಡೆ(ಎಸ್‌ಟಿಎಫ್) ತೀವ್ರ ಕಾರ್ಯಾಚರಣೆ ಮುಂದುವರಿಸಿದ್ದು ಕಳೆದ 24 ಗಂಟೆಯಲ್ಲಿ ಸುಮಾರು 100ರಷ್ಟು ಐಸಿಸ್ ಉಗ್ರರು ಶರಣಾಗಿದ್ದಾರೆ ಎಂದು ಸಿರಿಯದ ಅಧಿಕಾರಿಯೋರ್ವರು ತಿಳಿಸಿದ್ದಾರೆ.

  ರಾಖ ಸ್ಥಳೀಯಾಡಳಿತ ಮತ್ತು ಬುಡಕಟ್ಟು ಸಂಧಾನಕಾರರಿಗೆ ಇವರು ಶರಣಾಗತಿಯ ಸಂದೇಶ ಕಳುಹಿಸಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ. ಎಸ್‌ಡಿಎಫ್ ನೇಮಿಸಿರುವ ನಗರದ ತಾತ್ಕಾಲಿಕ ಆಡಳಿತ ವ್ಯವಸ್ಥೆಯು ಬುಡಕಟ್ಟು ಮುಖಂಡರ ಮೂಲಕ ನಾಗರಿಕರನ್ನು ಪಟ್ಟಣದಿಂದ ಸುರಕ್ಷಿತವಾಗಿ ಹೊರಗೆ ತರುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಒಂದೊಮ್ಮೆ ಐಸಿಸ್ ಉಗ್ರರು ಸಿರಿಯಾದಲ್ಲಿ ತಮ್ಮ ರಾಜಧಾನಿಯನ್ನಾಗಿಸಿಕೊಂಡಿದ್ದ ರಾಖ ಪಟ್ಟಣದಿಂದ ಇದುವರೆಗೆ ನೂರಾರು ನಾಗರಿಕರು ಸುರಕ್ಷಿತವಾಗಿ ಹೊರಗೆ ಬಂದಿದ್ದಾರೆ.

 ಸುಮಾರು 100ರಷ್ಟು ಐಸಿಸ್ ಉಗ್ರರು ಶರಣಾಗಿದ್ದು ಇವರನ್ನು ರಾಖದಿಂದ ಹೊರಗೆ ಕರೆದೊಯ್ಯಲಾಗಿದೆ. ಹೀಗೆ ಶರಣಾದವರೆಲ್ಲಾ ಸ್ಥಳೀಯ ಹೋರಾಟಗಾರರು. ವಿದೇಶಿ ಮೂಲದ ಉಗ್ರರು ಇನ್ನೂ ಶರಣಾಗಿಲ್ಲ. ಆದರೆ ಯಾವ ಉಗ್ರರನ್ನೂ ರಾಖ ಬಿಟ್ಟು ಹೊರ ತೆರಳದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

     ಸಿರಿಯಾದಲ್ಲಿ ಕಾರ್ಯಾಚರಿಸುತ್ತಿದ್ದ ಐಸಿಸ್ ತಂಡದ ಎಲ್ಲಾ ಸಿರಿಯನ್ ಉಗ್ರರು ಕಳೆದ ಕೆಲ ದಿನದ ಹಿಂದೆಯೇ ಸಿರಿಯಾವನ್ನು ತೊರೆದಿದ್ದು ಅಜ್ಞಾತ ಸ್ಥಳದತ್ತ ತೆರಳಿದ್ದಾರೆ ಎಂದು ಬ್ರಿಟನ್ ಮೂಲದ ಮಾನವ ಹಕ್ಕುಗಳ ಆಯೋಗದ ಸಿರಿಯ ವೀಕ್ಷಣಾ ತಂಡದ ಮುಖ್ಯಸ್ಥ ರಮಿ ಅಬ್ದೆಲ್ ರಹ್ಮಾನ್ ತಿಳಿಸಿದ್ದಾರೆ. ನಗರದಲ್ಲಿ ಇನ್ನೂ ಸುಮಾರು 150ರಷ್ಟು ವಿದೇಶಿ ಐಸಿಸ್ ಉಗ್ರರು ನೆಲೆಸಿದ್ದು ಇವರನ್ನು ಶರಣಾಗುವಂತೆ ಮನವೊಲಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ರಹ್ಮಾನ್ ತಿಳಿಸಿದ್ದಾರೆ. ಪೂರ್ವ ಸಿರಿಯಾದಲ್ಲಿರುವ ಡೈರ್ ಎಝಾರ್ ಪ್ರದೇಶಕ್ಕೆ ಒಂದೇ ತಂಡವಾಗಿ ತೆರಳು ತಮಗೆ ಅನುಮತಿ ನೀಡಬೇಕೆಂದು ವಿದೇಶಿ ಹೋರಾಟಗಾರರು ಬೇಡಿಕೆ ಮುಂದಿರಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಆದರೆ ಇದನ್ನು ಕುರ್ಡಿಷ್ ಪೀಪಲ್ಸ್ ಪ್ರೊಟೆಕ್ಷನ್ ಯುನಿಟ್ಸ್‌ನ ವಕ್ತಾರ ನೂರಿ ಮಹ್ಮೂದ್ ತಳ್ಳಿಹಾಕಿದ್ದಾರೆ. ಶರಣಾಗತಿಯ ಕುರಿತು ಯಾವುದೇ ಸಂಧಾನ ಮಾತುಕತೆ ನಡೆದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News