×
Ad

ಕಾಪು ಕ್ಷೇತ್ರದಲ್ಲಿ 25 ಕೆರೆಗಳ ಅಭಿವೃದ್ಧಿಗೆ ಸಂಕಲ್ಪ: ಸೊರಕೆ

Update: 2017-10-15 23:50 IST

ಉಡುಪಿ, ಅ.15: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಲೆವೂರು, ಕಟಪಾಡಿ, ಪಡುಬಿದ್ರೆ, ಕಾಪು ಸೇರಿದಂತೆ ವಿವಿಧ ಕಡೆಗಳಲ್ಲಿ ಈಗಾಗಲೇ 18 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಒಟ್ಟಾರೆ 25 ಕೆರೆಗಳನ್ನು ಅಭಿವೃದ್ಧಿ ಪಡಿಸುವ ಸಂಕಲ್ಪವನ್ನು ಹೊಂದಲಾಗಿದೆ ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಲೆವೂರು ಗ್ರಾಪಂ ವ್ಯಾಪ್ತಿಯ ಕೊರಂಗ್ರಪಾಡಿ ಮದಗ ಕೆರೆಯ 35ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಯನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನೀರಿನ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ದಿ ಹಾಗೂ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇಲ್ಲಿನ ವಾಡಿಕೆ ಮಳೆ ಈ ವರ್ಷ ಶೇ.16ರಷ್ಟು ಕಡಿಮೆ ಆಗಿದೆ. ಅಭಿವೃದ್ಧಿ ಎಂಬುದು ಕೇವಲ ರಸ್ತೆ ನಿರ್ಮಾಣ ಮಾತ್ರವಲ್ಲ, ಪರಿಸರದ ಬಗ್ಗೆ ಕಾಳಜಿ ಕೂಡ ಮುಖ್ಯ ವಾಗುತ್ತದೆ. ಈಗಾಗಲೇ ಕಾಪು ಪುರಸಭೆ ವ್ಯಾಪ್ತಿಯಲ್ಲಿ 8000 ಗಿಡಗಳನ್ನು ನೆಡಲಾಗಿದ್ದು, ಒಟ್ಟು 75ಸಾವಿರ ಗಿಡಗಳನ್ನು ವಿತರಿಸಲಾಗಿದೆ ಎಂದರು.

ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ ಮಾತನಾಡಿ, ಜನರಿಂದ ಸಂಗ್ರಹಿ ಸಿದ ಕೆರೆ ಅಭಿವೃದ್ಧಿ ಶುಲ್ಕದಿಂದ ಈವರೆಗೆ 18 ಕೆರೆಗಳನ್ನು ಅಭಿವೃದ್ಧಿ ಪಡಿಸ ಲಾಗಿದೆ. ನಗರ ವ್ಯಾಪ್ತಿಯಲ್ಲಿ ಇನ್ನು 40 ಕೆರೆಗಳು ಅಭಿವೃದ್ಧಿ ಬಾಕಿ ಇದೆ. ಹಂತ ಹಂತವಾಗಿ ಇದನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಸದಸ್ಯರಾದ ಪ್ರವೀಣ್ ಕುಮಾರ್ ಶೆಟ್ಟಿ, ಗಿರೀಶ್ ಕುಮಾರ್, ವಯಲೆಟ್ ಡಿಸೋಜ, ಅಲೆವೂರು ಗ್ರಾಪಂ ಸದಸ್ಯರಾದ ಪುಷ್ಪ ಅಂಚನ್, ಆನಂದ್, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಎಕ್ಸಿಕ್ಯೂಟಿವ್ ಇಂಜಿನಿಯರ್ ಕೆ.ಎಸ್.ಹೆಲ್ಸೂರು ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News