×
Ad

ಗ್ರೇಟ್ ಮರಾಠಾಸ್ ತಂಡಕ್ಕೆ ‘ಮರಾಠಾಸ್ ಪ್ರೀಮಿಯರ್ ಲೀಗ್’ ಟ್ರೋಫಿ

Update: 2017-10-15 23:57 IST

ಮಂಗಳೂರು, ಅ.15: ಕರಾವಳಿ ಮರಾಠಾಸ್ ಸಂಘಟನೆಗಳು ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿದ ‘ಮರಾಠಾಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯದ ಫೈನಲ್‌ನಲ್ಲಿ ಗ್ರೇಟ್ ಮರಾಠಾಸ್ ತಂಡ ಕಾಸರಗೋಡು ಟೈಗರ್ಸ್‌ ತಂಡವನ್ನು ಸೋಲಿಸುವ ಮೂಲಕ ಆಕರ್ಷಕ ಪ್ರೀಮಿಯರ್ ಲೀಗ್ ಟ್ರೋಫಿ ಹಾಗೂ 1 ಲಕ್ಷ ರೂ. ತನ್ನದಾಗಿಸಿಕೊಂಡಿತು.

ಶನಿವಾರ ಛತ್ರಪತಿ ವಾರಿಯರ್ಸ್‌, ಗ್ರೇಟ್ ಮರಾಠಾಸ್, ಮರಾಠ ಜಾಧವಾಸ್, ಕೆಕೆಎಂಪಿ, ಆರ್ಯನ್ ರೈಸಿಂಗ್ ಸ್ಟಾರ್, ಕಾಸರಗೋಡು ಮರಾಠ ಟೈಗರ್ಸ್‌ ತಂಡಗಳ ಜತೆ ಲೀಗ್ ಪಂದ್ಯಾಟ ಆರಂಭಗೊಂಡಿತು.

ರವಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆರ್ಯನ್ಸ್ ಮತ್ತು ಗ್ರೇಟ್ ಮರಾಠಾಸ್ ತಂಡ ಮುಖಾಮುಖಿಯಾಗಿ ಗ್ರೇಟ್ ಮರಾಠ ಫೈನಲ್‌ಗೇರಿದರೆ, ಛತ್ರಪತಿ ವಾರಿಯರ್ಸ್‌ ಮತ್ತು ಕಾಸರಗೋಡು ಮರಾಠ ಟೈಗರ್ಸ್‌ ಹಣಾಹಣೆಯಲ್ಲಿ ಕಾಸರಗೋಡು ತಂಡ ಫೈನಲ್‌ಗೇರಿತು. ಲೀಗ್‌ನಲ್ಲಿ 5 ಓವರ್ ಸೀಮಿತವಾದ ಪಂದ್ಯವನ್ನು ಕತ್ತಲಾದ ಕಾರಣ ಫೈನಲ್‌ನಲ್ಲಿ 4 ಓವರ್‌ಗೆ ಇಳಿಸಲಾಯಿತು.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕಾಸರಗೋಡು ಮರಾಠ ಟೈಗರ್ಸ್‌ ತಂಡ 4 ಓವರ್‌ಗಳಲ್ಲಿ 25 ರನ್ ಬಾಚಿದರೆ ಅದನ್ನು ಬೆಂಬತ್ತಿದ್ದ ಗ್ರೇಟ್ ಮರಾಠ ತಂಡ 3.3 ಓವರ್‌ಗಳಲ್ಲೇ 26ರನ್ ಗಳಿಸುವ ಮೂಲಕ ವಿಜಯಗಳಿಸಿತು.

ಮ್ಯಾನ್‌ಆಫ್‌ದಿ ಸಿರೀಸ್ ಪ್ರಶಸ್ತಿಯನ್ನು ಕಾಸರಗೋಡು ಮರಾಠ ಟೈಗರ್ಸ್‌ ತಂಡದ ವೈಭವ್ ಪಡೆದರೆ, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಅಶ್ವತ್ಥ್ ಚಂದ್ರಮಾನ್ ಪಡೆದರು.

ಸಮಾರೋಪ ಕಾರ್ಯಕ್ರಮದಲ್ಲಿ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಣೇಶ್ ರಾವ್ ಮತ್ತು ಗಣ್ಯರು ಪ್ರಶಸ್ತಿ ವಿತರಣೆ ನಡೆಸಿದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡ ವೇದವ್ಯಾಸ ಕಾಮತ್, ಬ್ರಿಜೇಶ್ ಚೌಟ, ಚಿತ್ರ ನಿರ್ಮಾಪಕ ತಾರನಾಥ ಶೆಟ್ಟಿ ಬೋಳಾರ್, ಆರ್ಯ ಯಾನೆ ಮರಾಠ ಸಮಾಜ ಸಂಘದ ಅಧ್ಯಕ್ಷ ದೇವೊಜಿರಾವ್ ಯಾದವ್, ಸಂಘಟಕರಾದ ಸಚಿನ್ ಮೊರಾಯ್, ಪ್ರದೀಪ್‌ಚಂದ್ರ ಜಾದವ್, ಧರ್ಮರಾಜ್ ಜಾದವ್, ದೀಪಕ್ ಚಂದ್ರಮನ್, ರಾಜ್‌ಕುಮಾರ್ ಲಾಡ್, ಯತೀಶ್ ವಿ. ರಾವ್ ಲಾಡ್ ಉಪಸ್ಥಿತರಿದ್ದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News