×
Ad

ಮಣಿಪಾಲದಲ್ಲಿ ಅಕ್ರಮ ವಾಸ್ತವ್ಯ: ನೈಜಿರಿಯಾ ಪ್ರಜೆ ಬಂಧನ

Update: 2017-10-16 20:02 IST

ಮಣಿಪಾಲ, ಅ.16: ವೀಸಾ ಅವಧಿ ಮುಗಿದ ನಂತರವೂ ಕಳೆದ 10 ತಿಂಗಳುಗಳಿಂದ ಮಣಿಪಾಲದಲ್ಲಿ ಅಕ್ರಮವಾಗಿ ವಾಸವಾಗಿದ್ದ ನೈಜಿರಿಯಾದ ಪ್ರಜೆ ಯೊಬ್ಬನನ್ನು ಮಣಿಪಾಲ ಪೊಲೀಸರು ಇಂದು ಬಂಧಿಸಿದ್ದಾರೆ.

ಬಂಧಿತನನ್ನು ನೈಜಿರಿಯಾದ ರಾಜಿ ರೊಖಿಬ್ ಬಬತುಂಡೆ(25) ಎಂದು ಗುರುತಿಸಲಾಗಿದೆ. ಶಿಕ್ಷಣಕ್ಕಾಗಿ 2011ರ ಆ.24ರಂದು ಭಾರತಕ್ಕೆ ಬಂದ ಈತ ಮಣಿಪಾಲ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಅಲೈಡ್ ಸೈನ್ಸ್‌ನಲ್ಲಿ ಮಾಸ್ಟರ್ ಆಫ್ ಅಕ್ಯುಪೆಶನಲ್ ಥೆರಪಿಯನ್ನು ವಿದ್ಯಾಭ್ಯಾಸ ಮಾಡುತಿದ್ದನು. ಆತ ಇಲ್ಲಿಯೇ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದನು.

ಮಣಿಪಾಲ ಜಿಲ್ಲಾಧಿಕಾರಿ ರಸ್ತೆಯಲ್ಲಿರುವ ನೆಹರೂ ಬ್ಲಾಕ್‌ನ ಹಿಂಬದಿಯ ದಾಮೋದರ್ ನಿಲಯದಲ್ಲಿ ವಾಸವಾಗಿದ್ದ ಆತನ ಸ್ಟುಡೆಂಟ್ ವೀಸಾ ಅವಧಿಯು 2017ರ ಜ.31ಕ್ಕೆ ಮುಕ್ತಾಯವಾಗಿತ್ತು. ಅದರ ಬಳಿಕವೂ ಆತ ಭಾರತದಲ್ಲಿರಲು ವೀಸಾ ಮತ್ತು ವಾಸ್ತವ್ಯದ ನೊಂದಾವಣೆ ಪತ್ರ ಇಲ್ಲದೆ ಅಕ್ರಮವಾಗಿ ಮಣಿಪಾಲದಲ್ಲಿ ವಾಸ್ತವ್ಯವಿದ್ದು, ಪಾಸ್‌ಪೊರ್ಟ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದನು.

ಅದರಂತೆ ಪೊಲೀಸರು ಆತನನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆತನಿಗೆ ಅ.30ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News