×
Ad

ರಾಜ್ಯ ಸರಕಾರದಿಂದ ಆಧುನಿಕ ಭಸ್ಮಾಸುರನ ರೀತಿಯ ಆಡಳಿತ

Update: 2017-10-16 23:17 IST

ಬ್ರಹ್ಮಾವರ, ಅ.16: ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದರೆ ಅಹಂಕಾರ, ಅವ್ಯವಹಾರ, ಅಸಡ್ಡೆ. ಆಧುನಿಕ ಭಸ್ಮಾಸುರನ ರೀತಿಯಲ್ಲಿ ಆಡಳಿತ ನಡೆಸುತ್ತಿ ರುವ ಸಿದ್ದರಾಮಯ್ಯ ಮುಟ್ಟಿದ್ದೆಲ್ಲ ಮಾಯವಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ರಾಸಾಯನಿಕ ರಸಗೊಬ್ಬರ ಸಚಿವ ಅನಂತ್ ಕುಮಾರ್ ಟೀಕಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಸೋಮವಾರ ಬ್ರಹ್ಮಾವರ ಆಶ್ರಯ ಹೊಟೇಲಿನ ಬಳಿ ನಡೆದ ಜಿಲ್ಲಾ ಮಟ್ಟದ ಪರಿವರ್ತನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇಡೀ ರಾಜ್ಯದ ರಸ್ತೆಗಳು ಹೊಂಡಮಯವಾಗಿದೆ. ಬೆಂಗಳೂರಿನಲ್ಲಿ 33 ಸಾವಿರ ಹೊಂಡಗಳು ನಿರ್ಮಾಣವಾಗಿವೆ. ಬೇರೆ ಕಡೆಗಳಲ್ಲಿ ರಸ್ತೆಗಳೇ ಕಾಣು ತ್ತಿಲ್ಲ. ಇವರ ದುರಾಡಳಿತವನ್ನು ಕಿತ್ತೆಸೆದು ಹೊಸ ಆಡಳಿತ ನಡೆಸಲು ಬಿಜೆಪಿ ಯನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದ ಅವರು, ಕೇಂದ್ರ ಸರಕಾರ ದೇಶದಲ್ಲಿ ಗೊಬ್ಬರ ದರವನ್ನು ಇಳಿಕೆ ಮಾಡಿ, ವಿತರಣೆಯನ್ನು ಜಾಸ್ತಿ ಮಾಡಿದೆ ಎಂದರು.

ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಮಾತನಾಡಿ, ರಾಜ್ಯದ ಯಾವ ಸಚಿವರು ಕೂಡ ಕೆಲಸ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ನಡೆಸುವ ಬದಲು ಜಾತಿ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬೆಂಕಿ ಹಚ್ಚುವುದು ಒಂದೆ ಇವರ ಅಜೆಂಡಾ ಆಗಿದೆ. ವೀರ ಶೈವ- ಲಿಂಗಾಯಿತ ಧರ್ಮ, ಕನ್ನಡ ಧ್ವಜದ ವಿಷಯದಲ್ಲೂ ಅದನ್ನೇ ಮಾಡಲಾಗುತ್ತಿದೆ ಎಂದು ದೂರಿದರು.

ಸಂಸದೆ ಶೋಭಾ ಕರಂದ್ಲಾಜೆ, ಕಾರ್ಕಳ ಶಾಸಕ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಸುಕುಮಾರ್ ಶೆಟ್ಟಿ, ನಳಿನಿ ಪ್ರದೀಪ್ ರಾವ್, ಕುಯಿಲಾಡಿ ಸುರೇಶ್ ನಾಯಕ್, ಶ್ಯಾಮಲಾ ಕುಂದರ್, ಪ್ರಭಾಕರ ಪೂಜಾರಿ ಮೊದಲಾ ದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಯಪ್ರಕಾಶ್ ಹೆಗ್ಡೆ ಬೆಂಬಲಿಗರಾದ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ಮಾಜಿ ಕೋಟ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಸೇರಿದಂತೆ ನೂರಾರು ಮಂದಿ ಬಿಜೆಪಿಗೆ ಸೇರ್ಪಡೆಗೊಂಡರು.

ಮಾಜಿ ಶಾಸಕ ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ವಹಿಸಿದ್ದರು. ಉಡುಪಿ ಗ್ರಾಮಾಂತರ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ ಸ್ವಾಗತಿಸಿದರು. ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News