×
Ad

ಜನಸೇವೆಗೆ ನನ್ನ ಜೀವನ ಮುಡಿಪು: ಪ್ರಮೋದ್ ಮಧ್ವರಾಜ್

Update: 2017-10-17 20:37 IST

ಉಡುಪಿ, ಅ.17: ಜನಸೇವೆ ನಮ್ಮ ಕುಟುಂಬದ ಧ್ಯೇಯವಾಗಿದ್ದು, ಜನರ ಸೇವೆಯಲ್ಲಿ ಸಂತೋಷವನ್ನು ಕಾಣುತಿದ್ದೇನೆ. ಜನಸೇವೆಗಾಗಿ ನನ್ನ ಜೀವನವನ್ನು ಸಂಪೂರ್ಣವಾಗಿ ಮುಡಿಪಾಗಿಡುವುದಾಗಿ ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಪ್ರಮೋದ್ ಮಧ್ವರಾಜ್ ಅವರ 49ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಮೋದ್ ಮಧ್ವರಾಜ್ ಅಭಿಮಾನಿ ಬಳಗ ನಗರದ ಪುರಭವನದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರುಗಳಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಭಾ ಕಾರ್ಯಕ್ರಮದಲ್ಲಿ ಅವರು ಅಭಿಮಾನಿಗಳ, ಹಿತೈಷಿಗಳ, ಹಿರಿಯರ, ಕಿರಿಯರ ಅಭಿನಂದನೆ, ಶುಭಾಶಯಗಳನ್ನು ಸ್ವೀಕರಿಸಿ ಮಾತನಾಡುತಿದ್ದರು.

ನಾವು ನಮ್ಮ ಕುಟುಂಬದಲ್ಲಿ ಹುಟ್ಟುಹಬ್ಬಗಳನ್ನು ಆಚರಿಸುವ ಸಂಪ್ರದಾಯ ವನ್ನು ಇಟ್ಟುಕೊಂಡಿಲ್ಲ. ಜನರ ಸೇವೆಯೇ ನಮಗೆ ಹುಟ್ಟುಹಬ್ಬದ ಖುಷಿ ನೀಡುತ್ತದೆ. ಈ ಬಾರಿ ನನ್ನ ಹಿತೈಷಿಗಳು ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆಯಂಥ ಕಾರ್ಯಕ್ರಮಗಳು ಹೆಚ್ಚು ಖುಷಿ ನೀಡುತ್ತದೆ ಎಂದರು.
ಪರ್ಯಾಯ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಉಡುಪಿ ಕೆಥೋಲಿಕ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ವಂ.ಲಾರೆನ್ಸ್ ಡಿಸೋಜ, ಚೊಕ್ಕಬೆಟ್ಟು ಜುಮ್ಮಾ ಮಸೀದಿಯ ಧರ್ಮಗುರು ಗಳಾದ ಅಬ್ದುಲ್ ಅಜೀತ್ ದಾರಿಮಿ ಕಲ್ಲೇಗ ಅವರು ಶುಭಾಶಂಸನೆ ಮಾಡಿದರು.

 ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಉಡುಪಿಯ ಹಿರಿಯ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಕೆಎಂಸಿ ಮಣಿಪಾಲದ ಯುರೋಲಜಿ ವಿಭಾಗದ ಮುಖ್ಯಕ್ಷ ಡಾ.ಪದ್ಮರಾಜ್ ಹೆಗ್ಡೆ ಹಾಗೂ ಪ್ರಮೋದ್ ಮಧ್ವರಾಜ್ ಅಭಿಮಾನಿಗಳ ಸಮಾಜ ಸೇವಾ ಸಂಘ ಬೆಂಗಳೂರು ಇದರ ರಾಜ್ಯಾಧ್ಯಕ್ಷ ರಾಹುಲ್ ಅವರು ಅಭಿನಂದನಾ ಭಾಷಣ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಅತಿಥಿಗಳನ್ನು ಸ್ವಾಗತಿಸಿದರೆ, ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬ್ಲಾಕ್ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ವಂದಿಸಿದರೆ, ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.
ಕೊನೆಯಲ್ಲಿ ಅಭಿಮಾನಿ ಬಳಗ, ಉಡುಪಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ನಗರಸಭಾ ಸದಸ್ಯರ ವತಿಯಿಂದ ಪ್ರಮೋದ್ ಮಧ್ವರಾಜ್ ಅವರಿಗೆ ವಿಶೇಷ ಕಿರೀಟ ತೊಡಿಸಿ ಆತ್ಮೀಯವಾಗಿ ಅಭಿನಂದಿಸಲಾಯಿತು.

ಬೆಳಗ್ಗೆ 8:30ರಿಂದ ಅಪರಾಹ್ನ 12:30ರವರೆಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಟ್ಟು 434 ಮಂದಿ ಭಾಗವಹಿಸಿದ್ದು, ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News