ಸುಪ್ರೀಂ ಕೋರ್ಟ್ ಹೊರಭಾಗ ಪಟಾಕಿ ಸಿಡಿಸಿದ ಸಂಘಪರಿವಾರ: 14 ಮಂದಿಯ ಬಂಧನ

Update: 2017-10-17 16:53 GMT

ಹೊಸದಿಲ್ಲಿ, ಅ. 18: ಪಟಾಕಿಗಳ ಮೇಲೆ ಸುಪ್ರೀಂ ಕೋರ್ಟ್ ವಿಧಿಸಿರುವ ನಿಷೇಧವನ್ನು ಬಹಿರಂಗವಾಗಿ ವಿರೋಧಿಸಿರುವ ಸಂಘಪರಿವಾರದ ಸಂಘಟನೆಗಳು ದಿಲ್ಲಿಯಲ್ಲಿರುವ ಸರ್ವೋಚ್ಛ ನ್ಯಾಯಾಲಯದ ಆವರಣದ ಹೊರಭಾಗದಲ್ಲಿ ಮಂಗಳವಾರ ಸಂಜೆ ಪಟಾಕಿ ಸಿಡಿಸಿ ಪ್ರತಿಭಟನೆ ನಡೆಸಿದವು.

ಘಟನೆಗೆ ಸಂಬಂಧಿಸಿ ಮೂವರು ಮಹಿಳೆಯರು ಸೇರಿದಂತೆ 14 ಮಂದಿಯನ್ನು ಪೊಲೀಸರು ಬಂಧಿಸಿ ತಿಲಕ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಬಂಧಿತರು ಸತ್ಪಾತ್ರ ಮಲ್ಹೋತ್ರ ಅವರ ನೇತೃತ್ವದ ಅಜಾದ್ ಹಿಂದ್ ಪೌಜ್‌ನ ಸದಸ್ಯರು ಎಂದು ಪೊಲೀಸರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಪಟಾಕಿ ಸಿಡಿಸಬಾರದು ಎಂದು ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಈ ಗುಂಪು ಪ್ರತಿಭಟನೆ ನಡೆಸಿತು. ಆದಾಗ್ಯೂ ದಿಲ್ಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಪಟಾಕಿಗೆ ನಿಷೇಧ ಹೇರಿದೆ ಎಂಬುದನ್ನು ಇವರು ಅರಿತಿಲ್ಲ.

ಪಶ್ಚಿಮ ದಿಲ್ಲಿಯ ಹರಿನಗರ್‌ನಲ್ಲಿ ಕೊಳಗೇರಿ ಮಕ್ಕಳಿಗೆ ದಿಲ್ಲಿ ಬಿಜೆಪಿಯ ವಕ್ತಾರ ತೇಜಿಂದರ್ ಬಗ್ಗಾ ಪಟಾಕಿಗಳನ್ನು ವಿತರಿಸಿದ ಗಂಟೆಗಳ ಬಳಿಕ ಈ ಘಟನೆ ನಡೆದಿದೆ. ಮಕ್ಕಳಿಗೆ ಪಟಾಕಿ ವಿತರಿಸಿರುವ ಫೋಟೊ ಹಾಗೂ ವಿಡಿಯೋವನ್ನು ಬಗ್ಗಾ ಟ್ವೀಟ್ ಮಾಡಿದ್ದಾರೆ. ಪಟಾಕಿ ವಿತರಣೆಯಿಂದ ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News