ಮಾದಕ ವಸ್ತುಗಳ ವಿತರಕರ ಬಗ್ಗೆ ಎಚ್ಚರಿಕೆ ವಹಿಸಿ: ಪ್ರಸನ್ನ
Update: 2017-10-17 22:49 IST
ಮಂಗಳೂರು, ಅ. 17: ಮಾದಕ ದ್ರವ್ಯಗಳ ಸೇವನೆಯಿಂದ ಯುವ ಜನತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆತಂಕ ಎದುರಾಗುವ ಸಂಭವವಿದ್ದು, ಈಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಬೇಕು ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್.ಐ. ಪ್ರಸನ್ನ ಎಂ.ಎಸ್. ಹೇಳಿದರು.
ಅವರು ದ.ಕ. ಜಿಲ್ಲಾ ಪೋಲೀಸ್ ಇಲಾಖೆಯ ಡ್ರಗ್ಸ್ ತಡೆ ಅಭಿಯಾನದ ಅಂಗವಾಗಿ ಮಂಗಳವಾರ ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಂಜಾ, ಅಫೀಮು, ಮೊದಲಾದ ಮಾದಕ ವಸ್ತುಗಳನ್ನು ವಿತರಿಸುವವರು, ಮಾರುವವರು, ಬಳಸುವವರು, ಅವರ ಅಡ್ಡೆಗಳ ಬಗ್ಗೆ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಿ ಸಹಕರಿಸಬೇಕು. ಈ ಪಿಡುಗಿನಿಂದ ವಿದ್ಯಾರ್ಥಿಗಳನ್ನು ಕಾಪಾಡಿ ಅವರ ಉಜ್ವಲ ಭವಿಷ್ಯಕ್ಕೆ ರೂಪುಗೊಳ್ಳಲು ಸಹಕರಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ. ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಪ್ರಿಯಾ ಫ್ರ್ಯಾಂಕ್, ಬೋಧಕ ಸಿಬಂದಿಗಳು ಹಾಜರಿದ್ದರು. ಆಡಳಿತಾಧಿಕಾರಿ ಎಂ.ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.