ರಾಜಕೀಯ ಬದ್ಧತೆಯಿಂದ ಪಶ್ಚಿಮ ಘಟ್ಟ ಉಳಿಸಲು ಸಾಧ್ಯ: ಡಾ.ಮಧ್ಯಸ್ಥ

Update: 2017-10-17 17:23 GMT

ಉಡುಪಿ, ಅ.17: ಎಲ್ಲ ನದಿಗಳು ಪಶ್ಚಿಮಘಟ್ಟವನ್ನು ಹೊಂದಿಕೊಂಡು ಹರಿಯುತ್ತಿವೆ. ಇಲ್ಲಿನ ಅರಣ್ಯ ನಾಶವಾದರೆ ನದಿಗಳು ಬರಡಾಗುತ್ತವೆ. ಇದರಿಂದ ಮನುಷ್ಯ ಮಾತ್ರವಲ್ಲ ಸಕಲ ಜೀವರಾಶಿಗಳು ಕೂಡ ನಾಶವಾಗಲಿವೆ. ರಾಜಕೀಯ ಬದ್ಧತೆಯಿಂದ ಮಾತ್ರ ಪಶ್ಚಿಮ ಘಟ್ಟ, ಜೀವರಾಶಿ ಹಾಗೂ ನದಿ ಗಳನ್ನು ಉಳಿಸಲು ಸಾಧ್ಯ ಎಂದು ಪರಿಸರ ತಜ್ಞ ಡಾ.ಎನ್.ಎ.ಮಧ್ಯಸ್ಥ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಇಂದು ನಡೆದ ಕಾರ್ಯಕ್ರಮ ದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಪಶ್ಚಿಮಘಟ್ಟದಲ್ಲಿನ ಅರಣ್ಯ ನಾಶದಿಂದ ಉಷ್ಣಾಂಶ ಹಾಗೂ ತೇವಾಂಶಗಳು ಕೂಡ ಹೆಚ್ಚಾಗಲಿದೆ. ಇದು ಅಲ್ಲಿರುವ ಸೂಕ್ಷ್ಮ ಜೀವಿಗಳಿಗೆ ಬಹಳಷ್ಟು ಅಪಾಯಕಾರಿಯಾಗಿದೆ. ಇದಕ್ಕೆಲ್ಲ ಪರಿಹಾರ ಪಶ್ಚಿಮಘಟ್ಟವನ್ನು ಸಂರಕ್ಷಿಸುವುದು ಒಂದೇ ದಾರಿ. ಆದರೆ ಈ ಸಂಬಂಧ ಗಾಡ್ಗಿಲ್ ಹಾಗೂ ಕಸ್ತೂರಿ ರಂಗನ್ ನೀಡಿರುವ ವರದಿಯನ್ನು ನಮ್ಮ ಾಜಕಾರಣಿಗಳು ಒಪ್ಪುತ್ತಿಲ್ಲ ಎಂದರು.

ಅಧ್ಯಯನದ ಪ್ರಕಾರ ಕಾವೇರಿ ನದಿಯಲ್ಲಿ ಶೇ.40ರಷ್ಟು ನೀರಿನ ಪ್ರಮಾಣ ಕಡಿಮೆ ಆಗುತ್ತಿದೆ. ಆದರೆ ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ ಈ ಹಿಂದೆ ನೀಡಿದಷ್ಟೆ ಪ್ರಮಾಣದಲ್ಲಿ ನೀರು ನೀಡಬೇಕಾಗಿದೆ. ಇದೇ ರೀತಿ ಮುಂದುವರಿದರೆ ಕರ್ನಾಟಕಕ್ಕೆ ಕಾವೇರಿ ನೀರೆ ಸಿಗುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಆನೆಗಳು, ಚಿರತೆಗಳು ಇಂದು ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಒಂದು ವೇಳೆ ಎತ್ತಿನ ಹೊಳೆ ಯೋಜನೆ ಕಾರ್ಯಗತವಾದಲ್ಲಿ ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷ ಇನ್ನಷ್ಟು ಹೆಚ್ಚುತ್ತವೆ. ಎತ್ತಿನ ಹೊಳೆಯ ಹೆಸರಿನಲ್ಲಿ ನೇತ್ರಾವತಿಯ ನೀರನ್ನು ತೆಗೆಯುವ ಹುನ್ನಾರ ನಡೆಯುತ್ತಿದೆ. ಜನರ ಜೀವನದ ಜೊತೆ ಚೆಲ್ಲಾಟ ಆಡುವ ಈ ಯೋಜನೆ ಬೇಕೆ ಎಂದು ಅವರು ಪ್ರಶ್ನಿಸಿದರು.

ಉಡುಪಿಯ ಸ್ವರ್ಣ ನದಿಯ ನೀರು ಕೂಡ ಕಡಿಮೆ ಆಗುತ್ತಿದೆ. ಇದೇ ರೀತಿ ಮುಂದುವರಿದರೆ ಮುಂದಿನ 4-5ವರ್ಷಗಳಲ್ಲಿ ಸ್ವರ್ಣ ನದಿ ನೀರು ಸಿಗಲ್ಲ. ನಾವೀಗ ಶೇಖರಿಸಿ ಇಡಲಾದ ಅಣೆಕಟ್ಟಿನ ನೀರನ್ನು ಬಳಕೆ ಮಾಡುತ್ತಿದ್ದೇವೆ ಹೊರತು ಪಶ್ಚಿಮ ಘಟ್ಟದಿಂದ ಹರಿದು ಬರುತ್ತಿರುವ ನೀರನ್ನು ಅಲ್ಲ. ಹಾಗಾಗಿ ಸ್ವರ್ಣ ನದಿಯ ಮೂಲವಾಗಿ ಪಶ್ಚಿಮಘಟ್ಟದಲ್ಲಿ ಪರಿಸರಕ್ಕೆ ಪೂರಕವಾದ ಕೆಲಸ ವನ್ನು ಮಾಡಬೇಕು ಎಂದರು.

ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ರಾಜಕಾರಣಿಗಳ ಹಾಗೂ ಕೆಲವು ಜನರ ಸ್ವಾರ್ಥಕ್ಕೆ ನಮ್ಮ ಪರಿಸರ ಬಲಿಯಾಗು ತ್ತಿದೆ. ರಾಜಕಾರಣಿಗಳಿಗೆ ಮುಂದಿನ ಪೀಳಿಗೆಯ ಬಗ್ಗೆ ಯಾವುದೇ ಗಮನ ಇಲ್ಲ. ಇದರಿಂದ ದೇಶ ಅಪಾಯದ ಸ್ಥಿತಿಗೆ ಹೋಗುತ್ತಿದೆ. ಅಭಿವೃದ್ಧಿಯ ಒಂದು ಮುಖ ಮಾತ್ರ ನಾವು ನೋಡುತ್ತೇವೆ. ಆದರೆ ಇನ್ನೊಂದು ಮುಖ ಯಾರಿಗೂ ಕಾಣಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News