ರಸ್ತೆ ಅಪಘಾತಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಲಿ

Update: 2017-10-17 17:36 GMT

ಉಡುಪಿ, ಅ.17: ಉಡುಪಿಯ ಎಂಜಿಎಂ ಕಾಲೇಜಿನ ಸಮೀಪ ಇಂದು ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮೂಡು ಬೆಳ್ಳೆಯ ಪೀಟರ್ ರಫಾಯಲ್ ಅರ್ಹಾನ(64) ಮೃತಪಟ್ಟಿದ್ದಾರೆ.

ಇವರು ಬೆಳಗ್ಗೆ 8:15ರ ಸುಮಾರಿಗೆ ಮೂಡುಬೆಳ್ಳೆಯ ಮನೆಯಿಂದ ದೊಡ್ಡಣಗುಡ್ಡೆ ಬಾಳಿಗಾ ಆಸ್ಪತ್ರೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಎಂಜಿಎಂ ಕಾಲೇಜಿನ ಬಳಿ ಮಣಿಪಾಲದಿಂದ ಉಡುಪಿ ಕಡೆಗೆ ಬರುತ್ತಿದ್ದ ಎಕೆಎಂಎಸ್ ಖಾಸಗಿ ವೇಗದೂತ ಬಸ್ ಢಿಕ್ಕಿ ಹೊಡೆಯಿತು. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರು ಮಧ್ಯಾಹ್ನ 1ಗಂಟೆ ಸುಮಾರಿಗೆ ಮಣಿ ಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಇವರು ಮೂಡುಬೆಳ್ಳೆ ಸಂತ ಲಾರೆನ್ಸ್ ಅನುದಾನಿತ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ 1975ರಿಂದ ಒಟ್ಟು 37ವರ್ಷಗಳ ಕಾಲ ಸೇವೆ ಸಲ್ಲಿಸಿ 2012ರಲ್ಲಿ ನಿವೃತ್ತರಾಗಿದ್ದರು. 1990ರಿಂದ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. 1998ರಲ್ಲಿ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, 2001ರಲ್ಲಿ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಹಾಗೂ 2002ರಲ್ಲಿ ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ನಿವೃತ್ತಿ ಬಳಿಕ ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಯಲ್ಲಿ ಹೊರರೋಗ ವಿಭಾಗದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದರು.

ಇವರು ಪತ್ನಿ ಲೀನಾ ಅರಾನ್ಹಾ, ಪುತ್ರಿ ಪ್ರಿಯಾ, ಪುತ್ರ ಪ್ರೀತಂ ಅವರನ್ನು ಅಗಲಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News