ಬಿಜೆಪಿ ಸೇರ್ಪಡೆ ವದಂತಿ ಸುಳ್ಳು: ಪ್ರಮೋದ್

Update: 2017-10-17 17:44 GMT

ಉಡುಪಿ, ಅ.17: ಸೋಮವಾರ ನಗರದ ಐಬಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಅವರನ್ನು ಭೇಟಿಯಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ರ ಬಿಜೆಪಿ ಸೇರ್ಪಡೆ ವದಂತಿ ರೆಕ್ಕೆಪುಕ್ಕ ಅಂಟಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತೆಯೇ, ಇದೊಂದು ಅಪ್ಪಟ ಸುಳ್ಳು ಸುದ್ದಿ ಎಂದು ಉಡುಪಿ ಶಾಸಕರು ಮತ್ತೊಮ್ಮೆ ಸ್ಪಷ್ಟೀಕರಣ ನೀಡಿದ್ದಾರೆ.

ನಗರದ ಪುರಭವನದಲ್ಲಿ ನಡೆದ ತನ್ನ 49ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಿನ್ನೆ ತಾನು ಫ್ರಶ್ ಆಗಲೆಂದು ಐಬಿಗೆ ಬಂದಿದ್ದಾಗ, ಅಲ್ಲಿಗೆ ಅನಂತಕುಮಾರ್ ಬಂದಿರುವ ವಿಷಯ ತಿಳಿಯಿತು. ಸೌಜನ್ಯಕ್ಕಾಗಿ ಅಲ್ಲಿಗೆ ತೆರಳಿ ಅವರನ್ನು ಭೇಟಿಯಾಗಿ ಕುಶಲೋಪರಿ ನಡೆಸಿದ್ದೆ ಎಂದವರು ವಿವರಿಸಿದರು.

ರಾಜ್ಯದ ಸಚಿವನಾಗಿ, ನಮ್ಮದೇ ಕೇಂದ್ರ ಸಚಿವರನ್ನು ಮಾತನಾಡಿಸುವುದು ಸೌಜನ್ಯವೆಂದು ತಿಳಿದು ಅವರಿದ್ದಲ್ಲಿಗೆ ತೆರಳಿದ್ದೆ. ನಾವಿಬ್ಬರೇ ಕೂತು ಮಾತನಾಡಿಲ್ಲ. ಸಂಸದೆ ಶೋಭಾ, ಸುನಿಲ್‌ಕುಮಾರ್, ಅಶೋಕ್ ಸೇರಿದಂತೆ ಜಿಲ್ಲಾ ಬಿಜೆಪಿ ನಾಯಕರು ಅಲ್ಲಿದ್ದರು ಎಂದರು.

ಅವರನ್ನು ಭೇಟಿಯಾದಾಕ್ಷಣ ನಾನು ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದು ಹೇಳುವುದು ಸರಿಯಲ್ಲ. ಇಷ್ಟಕ್ಕೇ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ. ನಾನು ಪಕ್ಷಾಂತರ ಮಾಡುತ್ತಿಲ್ಲ. ನಾನೆಷ್ಟು ಸ್ಪಷ್ಟೀಕರಣ ನೀಡಿದರೂ ಕೆಲವು ಮಾಧ್ಯಮಗಳು ಅಪಪ್ರಚಾರ ಮಾಡುತ್ತಿವೆ ಎಂದು ಕಿಡಿ ಕಾರಿದರು.

ಅಮಿತ್ ಶಾ ಭೇಟಿಯಾಗಿಲ್ಲ: ನಾನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಇದುವರೆಗೆ ನೋಡಿಲ್ಲ. ಅವರನ್ನು ನಾನು ಭೇಟಿಯಾಗಿದ್ದೇನೆ ಎಂಬ ವಿಚಾರವೂ ಶುದ್ಧ ಸುಳ್ಳು. ಅವರನ್ನು ಟಿವಿಗಳಲ್ಲಿ ನೋಡಿರಬಹುದಷ್ಟೇ ಎಂದರು.

ಪ್ರಮೋದ್ ಬಿಜೆಪಿ ಸೇರುತ್ತಾರೆ ಎಂಬ ವದಂತಿ ಆಗಾಗ ಜೋರು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಐಬಿಯಲ್ಲಿ ಅವರಿಬ್ಬರು ಇರುವ ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News