ಪ್ರಥಮ ಪಯಣದಲ್ಲೇ 47 ನಿಮಿಷ ತಡವಾಗಿ ತಲುಪಿದ ಅತೀ ವೇಗದ ರಾಜಧಾನಿ ಎಕ್ಸ್ ಪ್ರೆಸ್!
ಮುಂಬೈ,ಅ.18 : ಕೇವಲ 14 ಗಂಟೆಗಳಲ್ಲಿ ದಿಲ್ಲಿಯಿಂದ ಮುಂಬೈ ತಲುಪುವುದೆಂದು ಹೇಳಲಾದ ಹೊಸ ರಾಜಧಾನಿ ಎಕ್ಸ್ ಪ್ರೆಸ್ ರೈಲು ತನ್ನ ಆರಂಬಿಕ ಪಯಣದಲ್ಲಿಯೇ ಎಡವಿ, 47 ನಿಮಿಷಗಳಷ್ಟು ತಡವಾಗಿ ತಲುಪಿದೆ.
ದಿಲ್ಲಿ ಹಾಗೂ ಮುಂಬೈ ನಡುವಣ ಮೂರನೇ ರಾಜಧಾನಿ ಎಕ್ಸ್‍ಪ್ರೆಸ್ ತನ್ನ ಮೊದಲ ಪಯಣವನ್ನು ಅಕ್ಟೋಬರ್ 16ರಂದು ದಿಲ್ಲಿಯ ಹಜ್ರತ್ ನಿಜಾಮುದ್ದೀನ್ ನಿಲ್ದಾಣದಿಂದ ಆರಂಭಿಸಿತ್ತು. ಈ ಹಿಂದಿನ ಎರಡು ರಾಜಧಾನಿ ಎಕ್ಸ್ ಪ್ರೆಸ್ ಗಳಿಗಿಂತ ವೇಗವಾಗಿ ಸಾಗುವ ರೈಲು ಎಂದು ಪರಿಗಣಿಸಲ್ಪಟ್ಟಿದ್ದ ಈ ಹೊಸ ರೈಲಿಗೆ ಕೇವಲ ಕೋಟಾ, ವಡೋದರ ಹಾಗೂ ಸೂರತ್ ನಿಲ್ದಾಣಗಳಲ್ಲಿ ನಿಲುಗಡೆಯಿದೆ.
ಆದರೆ ಬೆಳಿಗ್ಗೆ 6.10ಕ್ಕೆ ಬಾಂದ್ರಾ ಟರ್ಮಿನಸ್ ತಲುಪಬೇಕಿದ್ದ ರೈಲು 6.57ಕ್ಕೆ ತಲುಪಿತ್ತು. ರೈಲು ಸೂರತ್ ನಿಲ್ದಾಣವನ್ನು 2.25ಕ್ಕೆ ತಲುಪಬೇಕಿದ್ದರೂ 3.34ಕ್ಕೆ ತಲುಪಿತ್ತು. ರೈಲಿನ ಚಾಲಕ ಆದಷ್ಟು ಬೇಗ ಮುಂಬೈ ತಲುಪಲು ಯತ್ನಿಸಿದರೂ ಮಂಜಿನ ವಾತಾವರಣದಿಂದಾಗಿ ಅದು ಸಾಧ್ಯವಾಗಿಲ್ಲ.
ವಡೋದರ, ರತ್ಲಂ ನಡುವೆ ಸಂಚರಿಸುವಾಗಲೇ ರೈಲು ತನ್ನ ನಿಗದಿತ ಸಮಯಕ್ಕಿಂತ ಒಂದೂವರೆ ಗಂಟೆ ಹಿಂದಿತ್ತು.
ರಾಜಧಾನಿ ಎಕ್ಸ್ ಪ್ರೆಸ್ ಮೂರು ತಿಂಗಳ ಅವಧಿಗೆ- ಅಂದರೆ ಅಕ್ಟೋಬರ್ 16ರಿಂದ ಜನವರಿ 16ರ ತನಕ ವಾರದಲ್ಲಿ ಮೂರು ದಿನ ಸಂಚರಿಸಲಿದೆ.