ಪುತ್ರಿಯ ಮೃತದೇಹವನ್ನು ಹೆಗಲಲ್ಲಿ ಹೊತ್ತುಕೊಂಡು ಸಾಗಿದ ತಂದೆ

Update: 2017-10-18 12:19 GMT

ಹೊಸದಿಲ್ಲಿ, ಅ.18: ಸರಕಾರಿ ಆಸ್ಪತ್ರೆಯೊಂದು ಆ್ಯಂಬುಲೆನ್ಸ್ ನೀಡಲು ನಿರಾಕರಿಸಿದ ಕಾರಣ ತಂದೆಯೊಬ್ಬರು ತನ್ನ 9 ವರ್ಷದ ಪುತ್ರಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಆರು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ 9 ವರ್ಷದ ರೌಶನ್ ಕುಮಾರಿ ಪಾಟ್ನಾದ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಒಪಿಡಿ ಕೌಂಟರ್ ನಲ್ಲಿ ರಿಜಿಸ್ಟ್ರೇಶನ್ ಕಾರ್ಡನ್ನು ಪಡೆಯುವಂತೆ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದರು. ಇದರಂತೆ ಬಾಲಕಿಯ ತಂದೆ ರಂಬಲಾಕ್ ಕ್ಯೂನಲ್ಲಿ ನಿಂತಿದ್ದಾಗ ಅವರ ಪತ್ನಿ ಮಗುವಿನ ಸ್ಥಿತಿ ಚಿಂತಾಜನಕವಾಗುತ್ತಿದೆ ಎಂದು ತಿಳಿಸಿದ್ದರು. ಈ ಸಂದರ್ಭ ರಂಬಲಾಕ್ ಕ್ಯೂನಲ್ಲಿದ್ದ ಜನರಲ್ಲಿ ತನಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದು, ಯಾರೂ ಕಿವಿಗೊಡಲಿಲ್ಲ. ಕೌಂಟರ್ ನಲ್ಲಿದ್ದ ಕ್ಲೆರ್ಕ್ ಜೊತೆಗೂ ಅವರು ಬೇಗನೇ ಕಾರ್ಡ್ ನೀಡುವಂತೆ ವಿನಂತಿಸಿದ್ದರೂ ಕ್ಯೂನಲ್ಲಿ ಬರುವಂತೆ ಆತ ಹೇಳಿದ್ದ ಎಂದು ಬಾಲಕಿಯ ಹೆತ್ತವರು ಆರೋಪಿಸಿದ್ದಾರೆ.

ಈ ನಡುವೆ ಬಾಲಕಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ತನ್ನ ಗ್ರಾಮಕ್ಕೆ ಮಗಳ ಮೃತದೇಹವನ್ನು ಒಯ್ಯಲು ಆ್ಯಂಬುಲೆನ್ಸ್ ನೀಡುವಂತೆ ಹೆತ್ತವರು ಕೇಳಿದ್ದು, ಆ್ಯಂಬುಲೆನ್ಸ್ ನೀಡಲು ಆಸ್ಪತ್ರೆಯ ಆಡಳಿತ ನಿರಾಕರಿಸಿದೆ. ಆದ್ದರಿಂದ ಬಾಲಕಿಯ ತಂದೆ 4 ಕಿ.ಮೀ. ದೂರದ ಆಟೊ ರಿಕ್ಷಾ ನಿಲ್ದಾಣದವರೆಗೆ ಬಾಲಕಿಯ ಮೃತದೇಹವನ್ನು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.

ಚಿಕಿತ್ಸೆ ಸರಿಯಾದ ಸಮಯಕ್ಕೆ ಸಿಗದ ಕಾರಣ ಬಾಲಕಿ ಮೃತಪಟ್ಟಿದ್ದಾಳೆ ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಏಮ್ಸ್ ನಿರ್ದೇಶಕ ಡಾ. ಪ್ರಭಾತ್ ಕುಮಾರ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News