ಗುಜರಾತ್ ಚುನಾವಣೆ ಘೋಷಣೆ ವಿಳಂಬಕ್ಕೆ ಎಸ್‌ಡಿಪಿಐ ಆಕ್ರೋಶ

Update: 2017-10-18 13:45 GMT

ಮಂಗಳೂರು, ಅ.18: ಕೇಂದ್ರ ಚುನಾವಣಾ ಆಯೋಗವು ಗುಜರಾತ್ ವಿಧಾನ ಸಭೆಯ ಚುನಾವಣೆ ಘೋಷಣೆಗೆ ವಿಳಂಬ ಮಾಡುತ್ತಿರುವ ಕಾರ್ಯವೈಖರಿಗೆ ಎಸ್‌ಡಿಪಿಐ ಆಕ್ರೋಶ ವ್ಯಕ್ತಪಡಿಸಿವೆ.

ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹಾಗೂ ಚುನಾವಣಾ ಆಯೋಗ ಮಧ್ಯೆ ಒಳ ಒಪ್ಪಂದ ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿ ಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎ. ಸಯೀದ್, ಚುನಾವಣಾ ಆಯೋಗವು ಪ್ರಧಾನ ಮಂತ್ರಿಯನ್ನು ಖುಷಿಪಡಿಸಲು ಹೊರಟಿರುವ ಕ್ರಮವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿಯಾಗಿದೆ ಎಂದು ಬಣ್ಣಿಸಿದ್ದಾರೆ.

ದೇಶವು ಸರ್ವಾಧಿಕಾರಿ ವ್ಯವಸ್ಥೆಯತ್ತ ವಾಲುತ್ತಿದ್ದು, ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳು ಸರಕಾರದ ಒತ್ತಡಗಳಿಗೆ ಮಣಿಯುತ್ತಿದೆ. ಬಿಜೆಪಿಯ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಾಗಿದೆ. ಹಾಲಿ ಚುನಾವಣಾ ಆಯೋಗದ ಮುಖ್ಯಸ್ಥರು ಹಿಂದೆ ಗುಜರಾತ್ ಸರಕಾರದಲ್ಲಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಗುಜರಾತ್ ಚುನಾವಣಾ ಘೋಷಣೆಯನ್ನು ವಿಳಂಬ ಮಾಡಿ ತನಗೆ ನೀಡಲ್ಪಟ್ಟ ಹೊಸ ಹುದ್ದೆಯ ಋಣ ತೀರಿಸುತ್ತಿರುವಂತೆ ಭಾಸವಾಗುತ್ತಿದೆ.ಗುಜರಾತ್-ಹಿಮಾಚಲ ಚುನಾವಣಾ ಘೋಷಣೆಯಲ್ಲಿ ಆಯೋಗ ಮತ್ತು ಪ್ರಧಾನಮಂತ್ರಿ ಮೋದಿ ಪಾಲುದಾರಿಕೆ ಯಲ್ಲಿ ಬಿಜೆಪಿಗೆ ಏಕ ಪಕ್ಷೀಯವಾಗಿ ಪರೋಕ್ಷ ಬೆಂಬಲ ಕೊಡುತ್ತಿದೆ ಎಂದು ಎ. ಸಯೀದ್ ಆರೋಪಿಸಿದ್ದಾರೆ.

ಆಯೋಗದ ಮುಖ್ಯಸ್ಥರು ಸರಕಾರಗಳ ಮನವಿಗಳನ್ನು ಪರಿಗಣಿಸಬೇಕೆಂದಿಲ್ಲ. ಆಯೋಗವು ರಾಷ್ಟ್ರಪತಿ ಮತ್ತು ಸರ್ವೋಚ್ಛ ನ್ಯಾಯಾಲಯಕ್ಕೆ ಮಾತ್ರ ಉತ್ತರದಾಯಿತ್ವ ಹೊಂದಿದೆ. ಬಿಜೆಪಿಯ ವಿಷಯಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಬಿಜೆಪಿ ಪರ ನಿಲ್ಲುತ್ತಿರುವುದು ಆಶ್ಚರ್ಯಕರವಾಗಿದೆ. ಬಿಜೆಪಿ ನೇತೃತ್ವದ ಸರಕಾರವನ್ನು ಉಳಿಸಲು ವಿವಿಧ ಕಸರತ್ತುಗಳನ್ನು ಮಾಡಲಾಗುತ್ತಿದೆ. ವಾಸ್ತವದಲ್ಲಿ ಬಿಜೆಪಿ ಚುನಾವಣೆಯನ್ನು ಎದುರಿಸಲು ಸಿದ್ಧವಿಲ್ಲ. ಅಲ್ಲಿಯ ಚುನಾವಣೆಯನ್ನು ಮುಂದೂಡಲು ಪ್ರಧಾನಿ ನರೇಂದ್ರ ಮೋದಿ ಆಯೋಗಕ್ಕೆ ಪ್ರಭಾವ ಬಳಸಿದ್ದಾರೆ. ಗುಜರಾತಿನ ಜನರು ಮೋದಿ ಮತ್ತು ಅಲ್ಲಿಯ ಬಿಜೆಪಿ ಸರಕಾರದ ವಿರುದ್ಧವಾಗಿದ್ದಾರೆ. ದಲಿತರು, ಪಟೇಲರು ಹಾಗೂ ರೈತರು ಬಿಜೆಪಿಯ ಪರವಾಗಿಲ್ಲದಿರುವುದರಿಂದ ಬಿಜೆಪಿ ತನ್ನನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಚುನಾವಣೆಯಲ್ಲಿ ಸೋಲುವ ಭೀತಿ ಉಂಟಾಗಿದ್ದರಿಂದ ಬಿಜೆಪಿ ಚುನಾವಣೆಯ ಮುಂದೂಡಿಕೆಯನ್ನು ಬಯಸುತ್ತಿದೆ ಎಂದು ಎ.ಸಯೀದ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News