ಕಂಕನಾಡಿ: ಅವ್ಯವಸ್ಥೆ ವಿರುದ್ಧ ಧರಣಿ

Update: 2017-10-18 13:53 GMT

ಮಂಗಳೂರು, ಅ.18: ನಗರದ ಕಂಕನಾಡಿ ಪ್ರದೇಶದ ಪ್ರಮುಖ ರಸ್ತೆಯ ಮಾರುಕಟ್ಟೆಮ ಬಸ್ ನಿಲ್ದಾಣದ ಅವ್ಯವಸ್ಥೆಯ ವಿರುದ್ಧ ದ.ಕ.ಜಿಲ್ಲಾ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಮಂಗಳವಾರ ಧರಣಿ ನಡೆಸಿದರು.

ಕಂಕನಾಡಿಯ ಮುಖ್ಯರಸ್ತೆಗೆ ಅವೈಜ್ಞಾನಿಕ ಕಾಂಕ್ರಿಟ್ ಹಾಕಲಾಗಿದೆ. ಒಳ ರಸ್ತೆಗಳು ಮತ್ತು ಕೂಡುರಸ್ತೆಗಳು ಕೂಡ ಅಸ್ತವ್ಯಸ್ಥಗೊಂಡಿದೆ. ಕಂಕನಾಡಿ-ಪಂಪ್‌ವೆಲ್ ನಡುವೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಯು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ರಸ್ತೆಯಲ್ಲಿ ನೀರು ನಿಂತು ಮಲಿನವಾಗುತ್ತಿದೆ. ಬಸ್ ನಿಲ್ದಾಣ ಅವ್ಯವಸ್ಥೆಯಿಂದ ಕೂಡಿದೆ. ಮಾರುಕಟ್ಟೆ ಶಿಥಿಲಾವಸ್ಥೆಯಲ್ಲಿದೆ. ಇದರ ವಿರುದ್ಧ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸರಕಾರಿ ಅಧಿಕಾರಿಗಳ, ಜನಪ್ರತಿನಿಧಿಗಳ ಈ ಕಾರ್ಯವೈಖರಿ ಖಂಡನೀಯ ಎಂದು ಧರಣಿನಿರತರು ಆರೋಪಿಸಿದರು.

ಈ ಸಂದರ್ಭ ಎಂಸಿಸಿ ಸಿವಿಕ್ ಗ್ರೂಪ್ ಮೂಲಕ ಎಎಪಿ ಮುಖಂಡರು ಮಂಗಳೂರಿನ ಆಡಳಿತದಲ್ಲಿ ಸಮುದಾಯದ ಭಾಗವಹಿಸುವಿಕೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಮಾಡಿದರು.

ಅದಲ್ಲದೆ, ನೀರು ನಿಂತ ರಸ್ತೆಯಲ್ಲಿ ಕಾಗದದ ಪಾತಿದೋಣಿ ಬಿಡುವ ಮೂಲಕ ಮನಪಾ ಆಡಳಿತವನ್ನು ಅಣಕವಾಡಿದರು. ಧರಣಿಯಲ್ಲಿ ಎಎಪಿ ಮುಖಂಡ ರಾದ ರಾಜೇಂದ್ರ ಕುಮಾರ್, ಅರ್ಜುನ್, ಕಬೀರ್ ಕಾಟಿಪಳ್ಳ, ಅಬ್ದುಲ್ ಲತೀಫ್, ರೋಶನ್ ಹಾಗು ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಅಲಿಹಸನ್ ಮತ್ತಿತರರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News