ಧರ್ಮದ ಹೆಸರಲ್ಲಿ ಜನನಾಯಕರಾಗಬೇಡಿ: ಸಚಿವ ರೈ

Update: 2017-10-18 14:25 GMT

ಮಂಗಳೂರು, ಅ.18: ಕೆಲವು ಮಂದಿ ಕೋಮುಪ್ರಚೋದಿತ ಮಾತುಗಳನ್ನಾಡಿ ಧರ್ಮದ ಹೆಸರಿನಲ್ಲಿ ಜನನಾಯಕರಾಗಲು ಹೊರಡುತ್ತಿದ್ದಾರೆ. ಈ ರೀತಿಯ ನಾಯಕರಾಗುವ ಬದಲು ಜನರ ಸೇವೆ ಮಾಡಿ ಜನನಾಯಕರಾಗಿ ಗುರುತಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ನೇತೃತ್ವದಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಬುಧವಾರ ನಗರದ ಪುರಭವನದಲ್ಲಿ ಜರಗಿದ ‘ಸರ್ವ ಧರ್ಮಗಳ ಸಂಗಮ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದ್ವೇಷದಿಂದ ಜಗತ್ತನ್ನು ಎಂದೂ ಆಳಲು ಸಾಧ್ಯವಿಲ್ಲ. ಪ್ರೀತಿಯಿಂದ ಮಾತ್ರ ಸಾಧ್ಯ. ದೇವರು-ಧರ್ಮಕ್ಕಾಗಿ ಜಗಳವಾಡುವುದು ಮನುಷ್ಯತ್ವವಲ್ಲ. ಮನುಷ್ಯ ದ್ವೇಷಿಯು ಧರ್ಮ ದ್ವೇಷಿಯೂ ಆಗಿದ್ದಾನೆ. ದ್ವೇಷ ಅಳಿಸಲು ಮನುಷ್ಯದ ಮಧ್ಯೆ ಪರಸ್ಪರ ವಿಶ್ವಾಸ ಮೂಡಿಸುವ ಅಗತ್ಯವಿದೆ. ವಿಶ್ವಾಸವಿಲ್ಲದಿದ್ದರೆ ಬದುಕು ಅಸಾಧ್ಯ. ಇಂತಹ ಪ್ರೀತಿ-ವಿಶ್ವಾಸ ಮೂಡಿಸಲು ಅಪನಂಬಿಕೆಯನ್ನು ದೂರ ಮಾಡಬೇಕಿದೆ ಎಂದು ಬಿ.ರಮಾನಾಥ ರೈ ಹೇಳಿದರು.

ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ, ಸಿಎಸ್‌ಐ ಕೆಎಸ್‌ಡಿ ಧರ್ಮಾಧ್ಯಕ್ಷ ರೈ. ರೆ. ಮೋಹನ್ ಮನೋರಾಜ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ಕಾರ್ಯಕ್ರಮವನ್ನು ಜಂಟಿಯಾಗಿ ಉದ್ಘಾಟಿಸಿದರು.

ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾರ್ಯಕ್ರಮದ ರುವಾರಿ ಐವನ್ ಡಿಸೋಜ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳ ಹಬ್ಬದ ಸಂದರ್ಭ ಇಂತಹ ಹಬ್ಬಗಳನ್ನು ಎಲ್ಲಾ ಧರ್ಮೀಯರು ಆಚರಿಸುವ ಪರಿಪಾಠವನ್ನು ಕೆಲವು ವರ್ಷದಿಂದ ಮಾಡುತ್ತಾ ಬಂದಿದ್ದೇನೆ. ಇದರಿಂದ ಮತೀಯ ಸೌಹಾರ್ದ ಹೆಚ್ಚಲು ಸಾಧ್ಯವಿದೆ ಎಂದರು.

ವೇದಿಕೆಯಲ್ಲಿ ಮೇಯರ್ ಕವಿತಾ ಸನಿಲ್, ಉಪಮೇಯರ್ ರಜನೀಶ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಸಚಿವ ಅಮರನಾಥ ಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಬೆಳ್ತಂಗಡಿ, ಉದ್ಯಮಿಗಳಾದ ಎ.ಸದಾನಂದ ಶೆಟ್ಟಿ, ಯೆನೆಪೊಯ ಅಬ್ದುಲ್ಲ ಕುಂಞಿ, ಸುನೀಲ್ ಪಾಸ್, ಸುರೇಶ್ ಶೆಟ್ಟಿ ಮುಂಬೈ, ಎಲಿಯಾಸ್ ಸ್ಯಾಂಟ್ರಿಸ್, ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಮನಪಾ ಸಚೇತಕ ಶಶಿಧರ ಹೆಗ್ಡೆ, ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನಾಗವೇಣಿ, ಪ್ರತಿಭಾ ಕುಳಾಯಿ, ಸಬಿತಾ ಮಿಸ್ಕಿತ್, ಎಚ್‌ಎಂಎಸ್ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾದ ನಾಗೇಂದ್ರ ಕುಮಾರ್, ಯಶವಂತ ಶೆಟ್ಟಿ, ಶಾಹುಲ್ ಹಮೀದ್ ಕದಿಕೆ, ಅಮೃತ್ ವಿ. ಕದ್ರಿ, ಮಾಜಿ ಮೇಯರ್ ಕೆ.ಅಶ್ರಫ್, ಜಿಪಂ ಸದಸ್ಯರಾದ ಯು.ಪಿ.ಇಬ್ರಾಹೀಂ, ಶಾಹುಲ್ ಹಮೀದ್ ಬಂಟ್ವಾಳ, ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯರಾಮ ಶೇಖ, ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಎನ್‌ಎಸ್‌ಯುಐ ಜಿಲ್ಲಾ ಉಪಾಧ್ಯಕ್ಷ ಸೌಹಾದ್ ಗೂನಡ್ಕ, ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ, ಅಪ್ಪಿ, ಲತೀಫ್ ಕಂದುಕ, ಜೆಸಿಂತಾ ವಿಜಯಾ ಆಲ್ಫ್ರೆಡ್, ಆಶಾ ಡಿಸಿಲ್ವಾ, ಕಾಂಗ್ರೆಸ್ ಮುಖಂಡರಾದ ಹೇಮನಾಥ ಶೆಟ್ಟಿ ಪುತ್ತೂರು, ಯು.ಬಿ.ಸಲೀಂ ಉಳ್ಳಾಲ, ಡಾ. ರಘು, ವಿಶ್ವಾಸ್ ಕುಮಾರ್ ದಾಸ್, ಗುರುರಾಜ್ ಎಸ್. ಪೂಜಾರಿ ಮೂಲ್ಕಿ, ಮಾಜಿ ತಾಪಂ ಸದಸ್ಯ ಟಿ.ಎ.ಖಾದರ್ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಗಮನ ಸೆಳೆದ ಗೂಡುದೀಪ ಸ್ಪರ್ಧೆಗಳು: ಕಾರ್ಯಕ್ರಮದ ಅಂಗವಾಗಿ ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ದೇಹರ್ದಾಡ್ಯ ಪ್ರದರ್ಶನ, ಸಂಗೀತ ರಸಮಂಜರಿಯಲ್ಲದೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಚೆಕ್ ವಿತರಣೆ, ಅರ್ಹರಿಗೆ ಅಕ್ಕಿ ವಿತರಣೆ ಕಾರ್ಯಕ್ರಮವೂ ನಡೆಯಿತು.

ಈ ಮಧ್ಯೆ ಏರ್ಪಡಿಸಲಾದ ಗೂಡುದೀಪ ಸ್ಪರ್ಧೆಯು ವಿಶೇಷ ಗಮನ ಸೆಳೆಯಿತು. ಸ್ಪರ್ಧಾಳುಗಳು ರಚಿಸಿದ ವಿವಿಧ ಬಗೆಯ ಗೂಡುದೀಪಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News