ಬಜ್ಜೋಡಿ: ಗಾಂಜಾ ಸೇವಿಸುತ್ತಿದ್ದ ವಿದ್ಯಾರ್ಥಿ ಸೇರಿ 7 ಮಂದಿಯ ಸೆರೆ

Update: 2017-10-18 14:50 GMT

ಮಂಗಳೂರು, ಅ.18: ನಗರದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕರನ್ನು ಪತ್ತೆ ಹಚ್ಚಿ ಕ್ರಮಗೊಳ್ಳುವ ಸಲುವಾಗಿ ಮಂಗಳೂರು ನಗರ ಪೊಲೀಸರು ಕೈಗೊಳ್ಳುತ್ತಿರುವ ವಿಶೇಷ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ 7 ಮಂದಿ ಯುವಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಜ್ಜೋಡಿ 2ನೆ ಕ್ರಾಸ್‌ರಸ್ತೆಯ ಇನ್‌ಫೆಂಟ್ ಮೇರಿ ಚರ್ಚ್ ಬಳಿ ಜನವಾಸವಿಲ್ಲದ ಖಾಲಿ ಜಾಗದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಉರ್ವ ಹೊಗೆಬೈಲ್‌ನ ಆಲ್ವಿನ್ ಕ್ಲಿಂಟನ್ ಡಿಸೋಜ (22), ಬಿಕರ್ನಕಟ್ಟೆಯ ಕಂಡೆಟ್ಟು ಮೈದಾನದ ಅಜೇಯ್ ಸೆಬಾಸ್ಟಿನ್ ಲೋಬೊ (24), ಬಿಕರ್ನಕಟ್ಟೆಯ 1ನೆ ಸೈಟ್‌ನ ಜೋಯೆಲ್ ಫೆರ್ನಾಂಡಿಸ್(27), ಪಡೀಲ್ ಜೋಡುಕಟ್ಟೆಯ ಆದಿತ್ಯ (18), ಪಡೀಲ್‌ನ ದೇವರಾಜ್ (20), ಮೂಡುಶೆಡ್ಡೆಯ ರಾಮಭಜನಾ ಮಂದಿರದ ಅಕ್ಷಯ್ ಸಾಲಿಯಾನ್ (21), ಕೋಡಿಯಾಲ್‌ಬೈಲ್‌ನ ಅಮೋಘ ಹೆಗ್ಡೆ (27) ಎಂಬವರನ್ನು ಬಂಧಿಸಲಾಗಿದೆ.

ಗಾಂಜಾ ಸೇವನೆ ಮಾಡುತ್ತಿದ್ದ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನದ ಬಳಿಕ ಆರೋಪಿಗಳ ತಂದೆ, ತಾಯಿ, ಪಾಲನೆ-ಪೋಷಕರನ್ನು ಸಿಸಿಬಿ ಕಚೇರಿಗೆ ಪೊಲೀಸ್ ಅಧಿಕಾರಿಗಳು ಕರೆಯಿಸಿಕೊಂಡು ಯುವಕರು ಗಾಂಜಾ ಸೇವನೆ ಮಾಡಿದ ಬಗ್ಗೆ ತಿಳಿಸಿದರಲ್ಲದೆ ಯುವಕರ ಮೇಲೆ ನಿಗಾ ಇರಿಸುವಂತೆ ಸೂಚಿಸಿದರು.

ಬಂಧಿತ ಆರೋಪಿಗಳ ಪೈಕಿ ಒಬ್ಬಾತನು ಅಂತಿಮ ವರ್ಷ ಪದವಿ ವ್ಯಾಸಂಗ ಮಾಡುತ್ತಿದ್ದು, ಈತನು ವಿದ್ಯಾಭ್ಯಾಸ ಮಾಡುವ ವಿದ್ಯಾ ಸಂಸ್ಥೆಯ ಪ್ರಾಂಶು ಪಾಲರನ್ನು ಕರೆಯಿಸಿ ಮಾಹಿತಿ ನೀಡಲಾಗಿದೆ.

ಗಾಂಜಾ ಸೇವನೆ ಮಾಡಿದ 7 ಮಂದಿ ಯುವಕರನ್ನು ಮುಂದಿನ ಕ್ರಮಕ್ಕಾಗಿ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್ ಕಮಿಷನರ್ ಟಿ.ಆರ್ ಸುರೇಶ್ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್‌ರ ಮಾರ್ಗದರ್ಶನದಲ್ಲಿ ನಡೆದ ಈ ವಿಶೇಷ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News