ಎಲ್ಲ ಅರ್ಹ ಪ್ರಕರಣಗಳಲ್ಲಿ ವಿದೇಶಿಗರಿಗೆ ವೈದ್ಯಕೀಯ ವೀಸಾ ಮಂಜೂರು

Update: 2017-10-19 13:32 GMT

ಹೊಸದಿಲ್ಲಿ,ಅ.19: ಹಲವಾರು ಪಾಕಿಸ್ತಾನಿ ಪ್ರಜೆಗಳ ಕೋರಿಕೆಗಳಿಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ದೀಪಾವಳಿಯ ಶುಭಸಂದರ್ಭದಲ್ಲಿ ಭಾರತವು ಬಾಕಿಯುಳಿದಿರುವ ಎಲ್ಲ ಅರ್ಹ ಪ್ರಕರಣ ಗಳಲ್ಲಿ ವೈದ್ಯಕೀಯ ವೀಸಾಗಳನ್ನು ಮಂಜೂರು ಮಾಡುತ್ತದೆ ಎಂದು ಗುರುವಾರ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.

 ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ತಂದೆಯನ್ನು ಭೇಟಿಯಾ ಗಲು ವೀಸಾಕ್ಕಾಗಿ ಕೋರಿಕೆ ಸಲ್ಲಿಸಿದ್ದ ಪಾಕ್ ಮಹಿಳೆ ಆಮ್ನಾ ಶಮೀನ್‌ಗೆ ಪಾಕಿಸ್ತಾನ ದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸುವಂತೆ ಸೂಚಿಸಿರುವ ಸ್ವರಾಜ್, ನಾವು ಇದಕ್ಕೆ ಅವಕಾಶ ನೀಡುತ್ತೇವೆ ಎಂದಿದ್ದಾರೆ.

 ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಪಾಕಿಸ್ತಾನಿ ಮಗುವೊಂದಕ್ಕೆ ವೀಸಾ ನೀಡುವಂತೆ ಸ್ವರಾಜ್ ಬುಧವಾರ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಆದೇಶಿಸಿದ್ದರು. ಯಕೃತ್ತು ಕಸಿಗೊಳಗಾಗಿರುವ ತನ್ನ ಪುತ್ರ ಅಬ್ದುಲ್ಲಾನ ಚಿಕಿತ್ಸೆಗಾಗಿ ವೀಸಾ ಮಂಜೂರು ಮಾಡುವಂತೆ ಕಾಷಿಫ್ ಎನ್ನುವವರು ಸ್ವರಾಜ್‌ರನ್ನು ಕೋರಿಕೊಂಡಿದ್ದರು. ಮಗುವಿನ ಔಷಧಿಗಳು ಮುಗಿಯುತ್ತ ಬಂದಿವೆ ಮತ್ತು ಭಾರತದಲ್ಲಿ ವೈದ್ಯರನ್ನು ತಕ್ಷಣ ಕಾಣಬೇಕಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದರು.

ಭಾರತದಲ್ಲಿ ಯಕೃತ್ತು ಶಸ್ತ್ರಚಿಕಿತ್ಸೆಗೊಳಗಾಗಲು ಬಯಸಿರುವ ಪಾಕ್ ಮಹಿಳೆ ರಫೀಕ್ ಮೆಮನ್ ಎಂಬಾಕೆಗೂ ಸ್ವರಾಜ್ ಬುಧವಾರ ವೈದ್ಯಕೀಯ ವೀಸಾವನ್ನು ಮಂಜೂರು ಮಾಡಿದ್ದರು.

ನಝೀರ್ ಅಹ್ಮದ್ ಎಂಬಾತನ ಕೋರಿಕೆಗೂ ಸ್ವರಾಜ್ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಆತನ ಎಂಟು ವರ್ಷ ಪ್ರಾಯದ ಪುತ್ರ ಕಳೆದೊಂದು ವರ್ಷದಿಂದಲೂ ಭಾರತದ ವೈದ್ಯಕೀಯ ವೀಸಾಕ್ಕಾಗಿ ಕಾಯುತ್ತಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News