ಗುಜರಾತ್: ವಿಧಾನಸಭಾ ಚುನಾವಣೆಗೆ ಮುನ್ನ ಸರಕಾರದಿಂದ ಕೊಡುಗೆಗಳ ಸುರಿಮಳೆ

Update: 2017-10-19 13:42 GMT

ಅಹ್ಮದಾಬಾದ್,ಅ.19: ಗುಜರಾತ್‌ನಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮುನ್ನ ರಾಜ್ಯ ಸರಕಾರವು ಶಿಕ್ಷಕರು, ನಗರಸಭೆಗಳ ನೌಕರರು ಮತ್ತು ಇತರರಿಗೆ ಭರ್ಜರಿ ಕೊಡುಗೆಗಳನ್ನು ಪ್ರಕಟಿಸಿದೆ.

ಸರಕಾರಿ ಅನುದಾನಿತ ಪ್ರೌಢಶಾಲೆಗಳು ಮತ್ತು ಉನ್ನತ ಪ್ರೌಢಶಾಲೆಗಳಲ್ಲಿಯ ಐದು ವರ್ಷಗಳ ಅವಧಿಗೆ ನಿಗದಿತ ವೇತನ ಹೊಂದಿರುವ ಶಿಕ್ಷಕರ ವೇತನದಲ್ಲಿ ಗಣನೀಯ ಏರಿಕೆಯನ್ನು ಮಾಡಲಾಗಿದೆ.

 ಶಿಕ್ಷಕರ ವೇತನವನ್ನು 16,500 ರೂ.ನಿಂದ 25,000 ರೂ.ಗೆ ಮತ್ತು ಸಹಾಯಕ ಶಿಕ್ಷಕರ ವೇತನವನ್ನು 10,500 ರೂ.ನಿಂದ 16,224 ರೂ.ಗೆ ಹೆಚ್ಚಿಸಲಾಗಿದೆ. ಸುಮಾರು 7,000 ಶಿಕ್ಷಕರು ವೇತನ ಹೆಚ್ಚಳದ ಲಾಭ ಪಡೆಯಲಿದ್ದಾರೆ. ಈ ಶಾಲೆಗಳಲ್ಲಿಯ ಆಡಳಿತಾತ್ಮಕ ಸಹಾಯಕರ ವೇತನವನ್ನೂ ಈಗಿನ 11,500 ರೂ.ನಿಂದ 19,950 ರೂ.ಗೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಬುಧವಾರ ಗಾಂಧಿನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

 105 ನಗರಸಭೆಗಳ ಸುಮಾರು 15,000 ಉದ್ಯೋಗಿಗಳು ಇನ್ನು ಮುಂದೆ ಏಳನೇ ವೇತನ ಆಯೋಗದ ಶಿಫಾರಸಿಗನುಗುಣವಾಗಿ ವೇತನಗಳನ್ನು ಪಡೆಯಲಿದ್ದಾರೆ. ಅಲ್ಲದೆ ‘ಮಾ ವಾತ್ಸಲ್ಯ’ ಯೋಜನೆಯಡಿ ಯಾವುದೇ ಸರಕಾರಿ ಅನುಮೋದಿತ ಆಸ್ಪತ್ರೆಯಲ್ಲಿ ಎರಡು ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಲು ಅರ್ಹ ಫಲಾನುಭವಿಗಳಿಗೆ ನಿಗದಿಗೊಳಿಸಿದ್ದ ವಾರ್ಷಿಕ ಆದಾಯ ಮಿತಿಯನ್ನು 1.50 ಲ.ರೂ.ಗಳಿಂದ 2.50 ಲ.ರೂ. ಗಳಿಗೆ ಹೆಚ್ಚಿಸಲಾಗಿದೆ ಎಂದೂ ಪಟೇಲ ತಿಳಿಸಿದರು.

ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗಳ ಅಧಿಕಾರಾವಧಿ ಹೆಚ್ಚು ಕಡಿಮೆ ಒಂದೇ ಸಮಯಕ್ಕೆ ಅಂತ್ಯಗೊಳ್ಳಲಿದೆಯಾದರೂ ಚುನಾವಣಾ ಆಯೋಗವು ಕಳೆದ ವಾರ ಹಿಮಾಚಲ ಪ್ರದೇಶಕ್ಕೆ ಮಾತ್ರ ಚುನಾವಣಾ ದಿನಾಂಕವನ್ನು ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News