ಸಯೀದ್ ಗೃಹ ಬಂಧನ 30 ದಿನ ವಿಸ್ತರಣೆ

Update: 2017-10-19 14:00 GMT

ಲಾಹೋರ್, ಅ. 19: ಪಾಕಿಸ್ತಾನದ ಪಂಜಾಬ್ ಪ್ರಾಂತದ ನ್ಯಾಯಾಂಗ ಪರಿಶೀಲನಾ ಮಂಡಳಿಯು ಮುಂಬೈ ದಾಳಿಯ ಸೂತ್ರಧಾರಿ ಹಾಗೂ ನಿಷೇಧಿತ ಜಮಾಅತ್‌ಉದ್‌ದಾವ ಮುಖ್ಯಸ್ಥ ಹಫೀಝ್ ಸಯೀದ್‌ನ ಗೃಹ ಬಂಧನ ಅವಧಿಯನ್ನು ಇಂದು ಇನ್ನೂ 30 ದಿನಗಳ ಕಾಲ ವಿಸ್ತರಿಸಿದೆ.

ಆದರೆ, ಆತನ ನಾಲ್ವರು ಸಹಾಯಕರ ಬಂಧನವನ್ನು ವಿಸ್ತರಿಸಲು ಅದು ನಿರಾಕರಿಸಿದೆ.

30 ದಿನಗಳ ವಿಸ್ತರಣೆಯು ಅಕ್ಟೋಬರ್ 24ರಿಂದ ಜಾರಿಗೆ ಬರಲಿದೆ.

 ಸಯೀದ್‌ನ ನಾಲ್ವರು ಸಹಾಯಕರನ್ನು ಬೇರೆ ಪ್ರಕರಣದಲ್ಲಿ ಬಂಧಿಸದಿದ್ದರೆ, ಅವರು ಅಕ್ಟೋಬರ್ 24ರಂದು ಸ್ವತಂತ್ರರಾಗುತ್ತಾರೆ.

ಲಾಹೋರ್ ಹೈಕೋರ್ಟ್‌ನಲ್ಲಿರುವ ಪ್ರಾಂತೀಯ ನ್ಯಾಯಾಂಗ ಪರಿಶೀಲನಾ ಮಂಡಳಿಯ ಸಮ್ಮುಖದಲ್ಲಿ ಸಯೀದ್ ಮತ್ತು ಆತನ ಸಹಾಯಕರನ್ನು ಇಂದು ಭಾರೀ ಭದ್ರತೆಯೊಂದಿಗೆ ಹಾಜರುಪಡಿಸಲಾಯಿತು.

ನ್ಯಾಯಮೂರ್ತಿಗಳಾದ ಯವರ್ ಅಲಿ (ಮುಖ್ಯಸ್ಥರು), ಅಬ್ದುಲ್ ಸಮಿ ಮತ್ತು ಅಲಿಯಾ ನೀಲಂ ಅವರನ್ನೊಳಗೊಂಡ ಮೂವರು ಸದಸ್ಯರ ಪಂಜಾಬ್ ನ್ಯಾಯಾಂಗ ಪರಿಶೀಲನಾ ಮಂಡಳಿಯು ವಿಚಾರಣೆ ನಡೆಸಿತು.

ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ ಸಯೀದ್ ಮತ್ತು ಇತರರ ವಿರುದ್ಧದ ಗೃಹಬಂಧನವನ್ನು 3 ತಿಂಗಳು ವಿಸ್ತರಿಸಬೇಕೆಂದು ಪಂಜಾಬ್ ಸರಕಾರದ ಗೃಹ ಇಲಾಖೆ ಮನವಿ ಮಾಡಿತು.

 ಆದರೆ, ಲಾಹೋರ್‌ನಲ್ಲಿ ಸಯೀದ್‌ನ ಗೃಹಬಂಧವನವನ್ನು 30 ದಿನಗಳ ಕಾಲ ವಿಸ್ತರಿಸಲು ಮಂಡಳಿ ಆದೇಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News