ನೇಪಾಳದ ಮೂಲಕ ದಕ್ಷಿಣ ಏಶ್ಯ ಪ್ರವೇಶಕ್ಕೆ ಚೀನಾ ಯೋಜನೆ

Update: 2017-10-19 14:07 GMT

ಕಠ್ಮಂಡು (ನೇಪಾಳ), ಅ. 19: ಈ ವರ್ಷ 8.3 ಬಿಲಿಯ ಡಾಲರ್ (ಸುಮಾರು 53,955 ಕೋಟಿ ರೂಪಾಯಿ) ಹೂಡಿಕೆ ಮಾಡುವ ಮೂಲಕ, ಚೀನಾವು ನೇಪಾಳದಲ್ಲಿನ ತನ್ನ ಉಪಸ್ಥಿತಿಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದೆ.

ನೇಪಾಳವು ಭಾರತದೊಂದಿಗೆ ಮುಕ್ತ ಗಡಿಯನ್ನು ಹೊಂದಿರುವುದರಿಂದ ಅದನ್ನು ದಕ್ಷಿಣ ಏಶ್ಯಕ್ಕೆ ತನ್ನ ರಹದಾರಿಯನ್ನಾಗಿಸಿಕೊಳ್ಳುವ ಉತ್ಸುಕತೆಯನ್ನು ಚೀನಾ ಹೊಂದಿದೆ.

ಅನುದಾನಗಳು, ಬಡ್ಡಿರಹಿತ ಸಾಲಗಳು ಮತ್ತು ರಿಯಾಯಿತಿ ದರದ ಸಾಲಗಳ ರೂಪದಲ್ಲಿ ಚೀನಾವು ನೇಪಾಳಕ್ಕೆ ನೆರವು ನೀಡುತ್ತಿದೆ.

ಅದೂ ಅಲ್ಲದೆ, ನೇಪಾಳದ ಭದ್ರತಾ ಮತ್ತು ಸೇನಾ ಯೋಜನೆಗಳ ಜಾರಿಗೆ ಚೀನಾವು ನೇರ ನೆರವು ನೀಡುತ್ತಿದೆ. ಅದೇ ವೇಳೆ, ಟಿಬೆಟ್ ಸ್ವಾಯತ್ತ ವಲಯದ ಸರಕಾರವು ನೇಪಾಳದ ಉತ್ತರ ಗಡಿಯ ಜಿಲ್ಲೆಗಳಿಗೆ ಯೋಜನಾ ಆಧರಿತ ನೆರವು ನೀಡುತ್ತಿದೆ.

 ನೇಪಾಳವು 2008ರಲ್ಲಿ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆಗೆ ರೂಪಾಂತರಗೊಂಡಂದಿನಿಂದ ಅಲ್ಲಿ ಚೀನಾ ಹೂಡಿಕೆಗಳು ಗಣನೀಯವಾಗಿ ಹೆಚ್ಚಿವೆ.

ಮಾರ್ಚ್ 16ರಂದು ನಡೆದ ಹೂಡಿಕೆ ಶೃಂಗಸಭೆಯಲ್ಲಿ ಚೀನಾದ 16 ಕಂಪೆನಿಗಳು ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಜಲವಿದ್ಯುತ್ ಯೋಜನೆಗಳು, ಒಂದು ಆಸ್ಪತ್ರೆ ಮತ್ತು ಕಠ್ಮಂಡು ಮೆಟ್ರೊಗಾಗಿ 3 ಬಿಲಿಯ ಡಾಲರ್ (ಸುಮಾರು 19,500 ಕೋಟಿ ರೂಪಾಯಿ) ಹೂಡಿಕೆ ಮಾಡುವ ವಾಗ್ದಾನವನ್ನು ಚೀನಾ ಮೆಶಿನರಿ ಎಂಜಿನಿಯರಿಂಗ್ ಕಾರ್ಪೊರೇಶನ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News