ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತ: ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಚಿವ ಯು.ಟಿ.ಖಾದರ್ ಸೂಚನೆ
ಮಂಗಳೂರು, ಅ.19: ಬೊಳ್ಯಾರ್ -ಕಿನ್ಯ ಪ್ರದೇಶಕ್ಕೆ ಸಂಚರಿಸುತ್ತಿದ್ದ ಸರಕಾರಿ ಬಸ್ ಸ್ಥಗಿತಗೊಂಡ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಕಿನ್ಯಮತ್ತು ಬೊಳಿಯಾರು ಪ್ರದೇಶಕ್ಕೆ ಜನರ ಬೇಡಿಕೆ ಮೇರೆಗೆ ಸಂಚರಿಸುತ್ತಿದ್ದ ಸರಕಾರಿ ಬಸ್ ಇದೀಗ ಖಾಸಗಿ ಬಸ್ ಮಾಲಕರು ತಂದಿರುವ ಹೈ ಕೋರ್ಟ್ ತಡೆಯಾಜ್ಞೆಯಿಂದ ಸ್ಥಗಿತಗೊಂಡಿದೆ. ಇದರಿಂದ ಸ್ಥಳೀಯರಿಗೆ ಸಂಚಾರಕ್ಕೆ ಉಂಟಾಗಿರುವ ಸಮಸ್ಯೆಯ ದೂರಿನ ಹಿನ್ನೆಲೆಯಲ್ಲಿ ಗುರುವಾರ ಕಿನ್ಯ ಹಾಗೂ ಬೊಳಿಯಾರು ಪ್ರದೇಶದ ಸಾರ್ವಜನಿಕ ಪ್ರತಿನಿಧಿಗಳ ಸಮಾಲೋಚನಾ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡ ಸಚಿವ ಯು.ಟಿ. ಖಾದರ್ ಜನಸಾಮಾನ್ಯರ ಸಂಚಾರಕ್ಕೆ ತೊಂದರೆಯಾಗದಂತೆ ಸಂಚಾರ ವ್ಯವಸ್ತೆಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೂತನ ಜಿಲ್ಲಾಧಿಕಾರಿಯಿಂದ ಭರವಸೆ:- ಕಿನ್ಯ-ಬೊಳಿಯಾರು ಪ್ರದೇಶದಲ್ಲಿ ಸಂಚರಿಸುತ್ತಿದ್ದ ಸರಕಾರಿ ಬಸ್ ಈಗಾಗಲೇ ಹೈ ಕೋರ್ಟ್‌ನಿಂದ ಬಂದಿರುವ ತಡೆಯಾಜ್ಞೆಯಿಂದ ಅ.17ರವರೆಗೆ ಮಾತ್ರ ಸಂಚರಿಸಿದೆ. ಅ.30 ರವರೆಗೆ ಮಾತ್ರ ಈ ಬಸ್ ಓಡಲು ತಾತ್ಕಲಿಕ ಪರವಾನಿಗೆ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿ ಜನರ ಸಂಚಾರಕ್ಕೆ ಅನುಕೂಲವಾಗುವಂತೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ಜಿಲ್ಲಾಮಟ್ಟದ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಕ್ರಮ ಕೈ ಗೊಳ್ಳಲಾಗುವುದು ಎಂದು ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಸಸಿಕಾಂತ್ ಸೆಂಥಿಲ್ ಸಾರ್ವಜನಿಕರಿಗೆ ಭರವಸೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್ ಹಾಗೂ ಸಾರಿಗೆ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.