ಸಶಸ್ತ್ರ ಪಡೆಗಳ ಯೋಧರಿಗೆ ನಿಮಿಷಕ್ಕೆ 1 ರೂ.ದರದಲ್ಲಿ ಸ್ಯಾಟಲೈಟ್ ಫೋನ್ ಕರೆ ಸೌಲಭ್ಯ

Update: 2017-10-19 15:22 GMT

ಹೊಸದಿಲ್ಲಿ,ಅ.18: ಸಶಸ್ತ್ರ ಹಾಗೂ ಅರೆಸೈನಿಕ ಪಡೆಗಳ ಯೋಧರು ಇನ್ನು ಮುಂದೆ ತಮ್ಮ ಕುಟುಂಬಗಳ ಸದಸ್ಯರೊಂದಿಗೆ ನಿಮಿಷಕ್ಕೆ 1 ರೂ. ಬೆಲೆಯಲ್ಲಿ ಸ್ಯಾಟಲೈಟ್ ಫೋನ್‌ಗಳನ್ನು ಬಳಸಿಕೊಂಡು ಕರೆ ಮಾಡಬಹುದಾಗಿದೆಯೆಂದು ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಗುರುವಾರ ತಿಳಿಸಿದ್ದಾರೆ.

 ಪ್ರಸ್ತುತ ಇಂತಹ ಕರೆಗಳಿಗಾಗಿ ಸಶಸ್ತ್ರ ಪಡೆಗಳ ಯೋಧರಿಗೆ ನಿಮಿಷಕ್ಕೆ 5 ರೂ. ದರ ವಿಧಿಸಲಾಗುತ್ತಿದೆ. ‘‘ದುರ್ಗಮವಾದ ಪ್ರದೇಶಗಳಲ್ಲಿ ಮತ್ತು ಕಠಿಣವಾದ ಭೌಗೋಳಿಕ ಪರಿಸ್ಥಿತಿಯಿರುವ ಗಡಿಪ್ರದೇಶಗಳಲ್ಲಿ ನಿಯೋಜಿತರಾಗಿರುವ ಸಶಸ್ತ್ರಪಡೆಗಳು ಹಾಗೂ ಅರೆಸೈನಿಕ ಪಡೆಗಳ ಯೋಧರಿಗೆ ಇನ್ನು ಮುಂದೆ 5 ರೂ. ಬದಲು ಒಂದು ರೂ.ದರದಲ್ಲಿ ಸ್ಯಾಟಲೈಟ್ ಫೋನ್ ಕರೆಗಳನ್ನು ಮಾಡಲು ಸಾಧ್ಯವಾಗಲಿದೆಯೆಂದು ದೀಪಾವಳಿಯ ಮುನ್ನಾ ದಿನದಂದು ಘೋಷಿಸುತ್ತಿದ್ದೇವೆ’’ ಎಂದು ಸಿನ್ಹಾ ಬುಧವಾರ ತಿಳಿಸಿದ್ದಾರೆ.

 ಪ್ರಸ್ತುತ 500 ರೂ. ಮಾಸಿಕ ಬಾಡಿಗೆ ದರವನ್ನು ಭದ್ರತಾ ಪಡೆಗಳಿಗಾಗಿ ವಿಧಿಸಲಾಗುತ್ತದೆ. ಗುರುವಾರದಿಂದ ಅವರು ಯಾವುದೇ ಬಾಡಿಗೆಯನ್ನು ಪಾವತಿಸುವ ಅಗತ್ಯವಿರುವುದಿಲ್ಲವೆಂದು ಸಿನ್ಹಾ ಹೇಳುತ್ತಾರೆ.

  ಪ್ರಸ್ತುತ ಭದ್ರತಾ ಪಡೆಗಳಿಂದ ಉಪಗ್ರಹ ಫೋನ್ ಸಂಪರ್ಕಗಳಿಗಾಗಿ 500 ರೂ. ಮಾಸಿಕ ಬಾಡಿಗೆದರವನ್ನು ವಿಧಿಸಲಾಗುತ್ತಿದೆ. ಉಪಗ್ರಹ ಫೋನ್ ಸೇವೆಯನ್ನು ಈ ಮೊದಲು ಟಾಟಾ ಕಮ್ಯೂನಿಕೇಶನ್ಸ್ ಒದಗಿಸುತ್ತಿದೆ. ಆದರೆ ಈಗ ಅದನ್ನು ಸರಕಾರಿ ಮಾಲಕತ್ವದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಒದಗಿಸುತ್ತಿದೆ.

ಸಶಸ್ತ್ರಪಡೆಗಳಿಗೆ ಹಾಗೂ ಅರೆಸೈನಿಕಪಡೆಗಳಿಗೆ ನಿಮಿಷಕ್ಕೆ 1 ರೂ.ದರದಲ್ಲಿ ಉಪಗ್ರಹ ಫೋನ್ ಕರೆ ಸೌಲಭ್ಯ ಒದಗಿಸುವ ನಿರ್ಧಾರದಿಂದ ಕೇಂದ್ರದ ಬೊಕ್ಕಸಕ್ಕೆ ವಾರ್ಷಿಕವಾಗಿ 3-4 ಕೋಟಿ ರೂ. ಹೊರೆ ಬೀಳಲಿದೆಯೆಂದು ಟೆಲಿಕಾಂ ಕಾರ್ಯದರ್ಶಿ ಅರುಣಾ ಸುಂದರ್‌ರಾಜನ್ ಹೇಳಿದ್ದಾರೆ. ಪ್ರಸ್ತುತ ದೇಶಾದ್ಯಂತ 2,500 ಉಪಗ್ರಹ ಫೋನ್ ಸಂಪರ್ಕಗಳು ಕಾರ್ಯನಿರ್ವಹಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News