×
Ad

ರಾಂಚಿ, ದಿಲ್ಲಿಯಲ್ಲೂ ಆಧಾರ್‌ರಹಿತ ಬಡವರಿಗೆ ಪಡಿತರವಿಲ್ಲ : ಆರೋಪ

Update: 2017-10-19 21:10 IST

ಖುಂತಿ (ಜಾರ್ಖಂಡ್),ಅ.19: ಜಿಲ್ಲಾಡಳಿತವು ಆಧಾರ್ ಹೊಂದಿಲ್ಲವೆಂಬ ಕಾರಣಕ್ಕಾಗಿ ಬಡಕುಟುಂಬವೊಂದಕ್ಕೆ ಪಡಿತರ ಆಹಾರ ಪೂರೈಕೆಯನ್ನು ಕಡಿತಗೊಳಿಸಿದ ಬಳಿಕ ಆ ಕುಟುಂಬದ 11 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ ಎನ್ನಲಾದ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ. ಈ ಮಧ್ಯೆ ಜಾರ್ಖಂಡ್ ರಾಜಧಾನಿ ರಾಂಚಿ ಹಾಗೂ ಹೊಸದಿಲ್ಲಿಯ ವಿವಿಧೆಡೆ ಆಧಾರ್ ಸಂಖ್ಯೆ ಇಲ್ಲದಿದ್ದುದಕ್ಕಾಗಿ ತಮಗೆ ಪಡಿತರ ಆಹಾರ ಸಾಮಗ್ರಿಗಳನ್ನು ನೀಡಲಾಗುತ್ತಿಲ್ಲವೆಂದು ಹಲವಾರು ದೂರು ನೀಡಿದ್ದಾರೆ.

ಜಾರ್ಖಂಡ್‌ನಲ್ಲಿ 11 ವರ್ಷದ ಬಾಲಕಿ ಸಂತೋಷಿ ಕುಮಾರಿ ಸಾವನ್ನಪ್ಪಿರುವುದು ಮಲೇರಿಯಾ ಕಾಯಿಲೆಯಿಂದಾಗಿಯೇ ಹೊರತು ಹಸಿವಿನಿಂದಲ್ಲವೆಂಬ ಜಿಲ್ಲಾಡಳಿತ ಹೇಳಿಕೆಯಲ್ಲಿ ಹುರುಳಿಲ್ಲವೆಂದು ಎನ್‌ಡಿಟಿವಿ ವಾಹಿನಿಯ ವರದಿಯೊಂದು ಹೇಳಿದೆ.

   ಜಾರ್ಖಂಡ್ ರಾಜಧಾನಿ ರಾಂಚಿಯ ಹೊರವಲಯದಲ್ಲಿರುವ ಖುಂತಿ ಜಿಲ್ಲೆಯ ಗ್ರಾಮವೊಂದರಲ್ಲಿರುವ 60 ಮನೆಗಳ ಪೈಕಿ ಕನಿಷ್ಠ ಶೇ.20ರಷ್ಟು ಮಂದಿಯ ಹೆಸರುಗಳನ್ನು ಪಡಿತರದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇವರಲ್ಲಿ ಕೆಲವರಿಗೆ ಆಧಾರ್ ಕಾರ್ಡ್ ಇಲ್ಲದಿದ್ದರೆ, ಇನ್ನೂ ಕೆಲವರ ಆಧಾರ್‌ಕಾರ್ಡ್‌ನಲ್ಲಿ ಲೋಪಗಳಿರುವುದರಿಂದ ಅವರಿಗೆ ಪಡಿತರವನ್ನು ನಿರಾಕರಿಸಲಾಗಿದೆಯೆಂದು ತಿಳಿದುಬಂದಿದೆ.

ತನ್ನಲ್ಲಿ ಆಧಾರ್ ಕಾರ್ಡ್ ಇದ್ದರೂ, ಐದು ಮಂದಿಯ ತನ್ನ ಕುಟುಂಬಕ್ಕೆ ಪಡಿತರ ಆಹಾರ ಪಡೆಯಲು ತನಗಿನ್ನೂ ಸಾಧ್ಯವಾಗಿಲ್ಲವೆಂದು ಗ್ರಾಮದ ನಿವಾಸಿ 50 ವರ್ಷದ ನಾರದೆ ಮುಂಡೆ ಹೇಳುತ್ತಾರೆ. “ನಾವು ಪಡಿತರ ಸಾಮಗ್ರಿಗಳಿಗಾಗಿ ರೇಶನ್ ಅಂಗಡಿಗೆ ತೆರಳಿದಾಗ ಅವರು ನಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವಂತೆ ಕೇಳುತ್ತಾರೆ. ನನ್ನ ಆಧಾರ್ ಸಂಖ್ಯೆಯನ್ನು ಹಲವಾರು ಬಾರಿ ಸಲ್ಲಿಸಿದರೂ, ಪಡಿತರ ಪೂರೈಕೆ ಇನ್ನೂ ಆರಂಭಗೊಂಡಿಲ್ಲ’’ ಎಂದವರು ದೂರುತ್ತಾರೆ.ಮೃತಬಾಲಕಿಯ ಕುಟುಂಬ ಜಾರ್ಖಂಡ್‌ನ ಮಾವೋವಾದಿ ಚಟುವಟಿಕೆಗಳಿಂದ ಪೀಡಿತವಾದ ಸಿಮೆಡೆಗಾ ಜಿಲ್ಲೆಯಲ್ಲಿ ವಾಸವಾಗಿದೆ. ಆಕೆಯ ಕುಟುಂಬವು ಪಡಿತರ ಚೀಟಿಯನ್ನು ಹೊಂದಿತ್ತಾದರೂ, ಆಧಾರ್‌ಗೆ ಅದು ಲಿಂಕ್ ಮಾಡಿಲ್ಲವೆಂಬ ಕಾರಣಕ್ಕಾಗಿ ಈ ವರ್ಷ ಅದನ್ನು ರದ್ದುಪಡಿಸಲಾಗಿತ್ತು.

 ‘‘ ಅನ್ನಕ್ಕಾಗಿ ಮೊರೆಯಿಡುತ್ತಲೇ ನನ್ನ ಮಗಳು ಕೊನೆಯುಸಿರೆಳೆದಳು. ಕಳೆದ ನಾಲ್ಕೈದು ದಿನಗಳಿಂದ ನಾವು ಊಟ ಮಾಡಿಯೇ ಇಲ್ಲ” ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತೋಷಿಯ ತಾಯಿ ಕೋಯ್ಲಿ ದೇವಿ ಹೇಳುತ್ತಾರೆ.

 ಆದರೆ ಸಂತೋಷಿ ಮಲೇರಿಯಾದಿಂದ ಕೊನೆಯುಸಿರೆಳೆದಿರುವುದಾಗಿ ಹೇಳುವ ಮೂಲಕ ಜಿಲ್ಲಾಡಳಿತವು ತನಗೆ ತಾನೇ ಕ್ಲೀನ್‌ಚಿಟ್ ನೀಡಿದೆಯೆಂದು ಎನ್‌ಡಿಟಿವಿ ವರದಿ ಆರೋಪಿಸಿದೆ.

 ಈ ಮಧ್ಯೆ ಕೇಂದ್ರ ಆಹಾರ ಪೂರೈಕೆ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಹೇಳಿಕೆ ನೀಡಿ, ಆಧಾರ್‌ನ ಕಾರಣ ನೀಡಿ, ಯಾರಿಗೂ ಪಡಿತರ ಆಹಾರವನ್ನು ನಿರಾಕರಿಸಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.ಈ ವಿಷಯವಾಗಿ ತಾನು ಜಾರ್ಖಂಡ್‌ಗೆ ಸತ್ಯಶೋಧನಾ ತಂಡವೊಂದನ್ನು ಕಳುಹಿಸಿಕೊಡುವುದಾಗಿ ಅವರು ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆಯಷ್ಟೇ ಪಾಸ್ವಾನ್ ಅವರು, ರೇಶನ್‌ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವ ಮೂಲಕ ಕೇಂದ್ರ ಸರಕಾರವು ಹಲವಾರು ನಕಲಿ ಪಡಿತರಕಾರ್ಡ್‌ಗಳನ್ನು ತೆಗೆದುಹಾಕಿದೆ ಹಾಗೂ ಆ ಮೂಲಕ ಬೊಕ್ಕಸಕ್ಕೆ 14 ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ಉಳಿಸಿದೆಯೆಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News