ದಾಸ್ನಾ ಜೈಲಿನ ದಂತ ಚಿಕಿತ್ಸಾಲಯಕ್ಕೆ ಶೀಘ್ರವೇ ಆರುಷಿ ತಲ್ವಾರ್ ಹೆಸರು

Update: 2017-10-19 17:05 GMT

ಅಲಹಾಬಾದ್, ಅ.19: ಗಾಝಿಯಾಬಾದ್‌ನ ದಾಸ್ನಾ ಜೈಲಿನಲ್ಲಿರುವ ದಂತ ಚಿಕಿತ್ಸಾಲಯವು ಶೀಘ್ರವೇ ಆರುಷಿ ತಲ್ವಾರ್ ಹೆಸರನ್ನು ಪಡೆದುಕೊಳ್ಳಬಹುದು. 14 ಹರೆಯದ ಈ ಶಾಲಾಬಾಲಕಿಯ ಹತ್ಯೆ ಮತ್ತು ಪ್ರಕರಣದಲ್ಲಿ ಆಕೆಯ ಹೆತ್ತವರು ಅಪರಾಧಿಗಳೆಂದು ಸಿಬಿಐ ನ್ಯಾಯಾಲಯವು ನೀಡಿದ್ದ ತೀರ್ಪು ಇಡೀ ದೇಶದ ಗಮನ ವನ್ನು ಸೆಳೆದಿತ್ತು. ದಂತವೈದ್ಯರಾದ ರಾಜೇಶ ಮತ್ತು ನೂಪುರ್ ತಲ್ವಾರ್ ದಂಪತಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ಇತ್ತೀಚಿಗಷ್ಟೇ ಕೊಲೆ ಆರೋಪದಿಂದ ಮುಕ್ತ ಗೊಳಿಸಿದೆ.

ಇತ್ತೀಚಿಗೆ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ಪ್ರದೇಶದ ಬಂದೀಖಾನೆ ಗಳು ಮತ್ತು ಬಂದೀಖಾನೆಗಳ ಸುಧಾರಣೆ ಸಚಿವ ಜೈಕುಮಾರ ಸಿಂಗ್ ಅವರು, ಈ ಸಂಬಂಧ ತಲ್ವಾರ್ ದಂಪತಿಗಳ ಕೋರಿಕೆಯ ಆಧಾರದಲ್ಲಿ ಪ್ರಸ್ತಾವವೊಂದನ್ನು ರಾಜ್ಯ ಸರಕಾರವು ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ.

ವಾರಕ್ಕೆರಡು ಸಲ ಜೈಲಿನ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿ ತಮ್ಮ ಅಮೂಲ್ಯ ಸೇವೆ ಸಲ್ಲಿಸವಂತೆ ತಾನು ತಲ್ವಾರ್ ದಂಪತಿಯನ್ನು ಕೋರಲಿದ್ದೇನೆ ಎಂದೂ ಸಿಂಗ್ ಹೇಳಿದ್ದಾರೆ.

ತಮ್ಮ ನಾಲ್ಕು ವರ್ಷಗಳ ಜೈಲುವಾಸದಲ್ಲಿ ತಲ್ವಾರ್ ದಂಪತಿ ಕೈದಿಗಳಿಗೆ ಮಾತ್ರವಲ್ಲ, ಜೈಲಿನ ಸಿಬ್ಬಂದಿಗಳಿಗೂ ಚಿಕಿತ್ಸೆ ನೀಡಿದ್ದರು. ನಿಷ್ಕ್ರಿಯಗೊಂಡಿದ್ದ ದಂತ ಚಿಕಿತ್ಸಾಲಯಕ್ಕೆ ತಲ್ವಾರ ದಂಪತಿಯೇ ಪುನಃಶ್ಚೇತನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News