ಜವಳಿ ಉದ್ಯಮಿಯ ನಿವಾಸದಲ್ಲಿ 17 ಲ.ರೂ.ಗಳ ಹಳೆಯ ನೋಟುಗಳು ಪತ್ತೆ

Update: 2017-10-19 17:00 GMT

ಮುಂಬೈ,ಅ.19: ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ವು ಬುಧವಾರ ಇಲ್ಲಿಯ ಮಾಹಿಮ್ ನಲ್ಲಿಯ ಜವಳಿ ಉದ್ಯಮಿಯೋರ್ವನ ಮನೆ ಮೇಲೆ ದಾಳಿ ನಡೆಸಿದ್ದು, 17 ಲ.ರೂ.ವೌಲ್ಯದ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

 ಅ.7ರಂದು 8.9ಲ.ರೂ.ಗಳ ನಕಲಿ ನೋಟುಗಳೊಂದಿಗೆ ಕಾಂಗ್ರೆಸ್ ನಾಯಕ ಸೇರಿದಂತೆ ಮೂವರನ್ನು ಡಿಆರ್‌ಐ ಬಂಧಿಸಿದ ಬಳಿಕ ದಂಧೆಯ ಕಿಂಗ್ ಪಿನ್ ಆಗಿರುವ ರೆಹಾನ್ ಅಬ್ದುಲ್ ರಹೀಂ ಖಾನ್ ತನ್ನ ವಾಸಸ್ಥಳ ಮತ್ತು ಗುರುತನ್ನು ಆಗಾಗ್ಗೆ ಬದಲಾಯಿಸು ತ್ತಿದ್ದ. ಆತನನ್ನು ಸೋಮವಾರ ಕಲ್ಯಾಣದ ಶಿಲ್ಫಾಟಾದಲ್ಲಿನ ಆತನ ಸಂಬಂಧಿಯ ಮನೆಯಿಂದ ಬಂಧಿಸಿತ್ತು. ಈ ವೇಳೆ ಆತನ ಬಳಿಯಿಂದ 9.75 ಲ.ರೂ.ಗಳ 2,000 ಮತ್ತು 500 ರೂ.ಮುಖಬೆಲೆಗಳ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಹಿಂದೆ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ವಿನಿಮಯಿಸುವ ನೆಪದಲ್ಲಿ ಆತ ಹಲವಾರು ಜನರನ್ನು ವಂಚಿಸಿದ್ದ ಎನ್ನುವದು ಅಧಿಕಾರಿಗಳ ತನಿಖೆಯಿಂದ ಬೆಳಕಿಗೆ ಬಂದಿದೆ.

ಜವಳಿ ಉದ್ಯಮಿಯ ನಿವಾಸದ ಮೇಲೆ ನಾವು ದಾಳಿ ನಡೆಸಿದಾಗ 17ಲ.ರೂ.ಗಳ ಹಳೆಯ 1,000 ಮತ್ತು 500 ರೂ.ಗಳ ನೋಟುಗಳು ಪತ್ತೆಯಾಗಿವೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಈ ಬಗ್ಗೆ ಈವರೆಗೆ ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲ, ಯಾರನ್ನೂ ಬಂಧಿಸಿಯೂ ಇಲ್ಲ ಎಂದು ತಿಳಿಸಿರುವ ಡಿಆರ್‌ಐ ಈ ಹಳೆಯ ನೋಟುಗಳ ಮೂಲದ ಕುರಿತು ತನಿಖೆ ನಡೆಸುತ್ತಿದೆ.

ಉದ್ಯಮಿ ಕಮಿಷನ್‌ಗಾಗಿ ಹಳೆಯ ನೋಟುಗಳ ಪರಿವರ್ತನೆಗೆ ಪ್ರಯತ್ನಿಸುತ್ತಿದ್ದಿ ರಬಹುದು. ಹಳೆಯ ನೋಟುಗಳು ಇನ್ನೂ ಪತ್ತೆಯಾಗುತ್ತಿರುವುದು ಅಚ್ಚರಿಯನ್ನು ಮೂಡಿಸಿದೆ ಎಂದು ಅಧಿಕಾರಿ ತಿಳಿಸಿದರು.

ಪ್ರಕರಣದಲ್ಲಿ ಇನ್ನಷ್ಟು ಜನರು ಭಾಗಿಯಾಗಿದ್ದಾರೆ ಎಂದು ಡಿಆರ್‌ಐ ಶಂಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News