ನಾಪತ್ತೆಯಾಗಿರುವ ಪತ್ನಿ, ಮಗುವಿನ ಶೋಧಕ್ಕೆ ಯೋಧನ ಹತಾಶ ಪ್ರಯತ್ನ: ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮೊರೆ

Update: 2017-10-19 17:33 GMT

 ಮುಂಬೈ,ಅ.19: ಮಹಾರಾಷ್ಟ್ರದ ಪರ್ಭನಿ ಜಿಲ್ಲೆಯ ಯೋಧ ನಾಯ್ಕ ಅನಿಲ ಗೊಂಡ್ಗೆ (37) ಅವರು ತಾನು ಕರ್ತವ್ಯ ನಿರ್ವಹಿಸುತ್ತಿರುವ ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯ ತೆಂಗಾ ಕಣಿವೆಯಿಂದ ಒಂದು ತಿಂಗಳ ಹಿಂದೆ ನಾಪತ್ತೆಯಾಗಿರುವ ಪತ್ನಿ ಸ್ವಪ್ನಾ(33) ಮತ್ತು ಪುತ್ರಿ ಆರಾ(1) ಅವರನ್ನು ಪತ್ತೆ ಹಚ್ಚಲು ಸಾಕಷ್ಟು ಪ್ರಯತ್ನ ನಡೆಸಿ ಹತಾಶರಾಗಿದ್ದಾರೆ.

ಸ್ವಪ್ನಾ ಸೆ.20ರಂದು ದೇವಸ್ಥಾನಕ್ಕೆಂದು ಮಗುವಿನೊಂದಿಗೆ ಮನೆಯಿಂದ ಹೊರಬಿ ದ್ದಿದ್ದಳು. ಸಂಜೆ ಕರ್ತವ್ಯ ಮುಗಿಸಿ ಗೊಂಡ್ಗೆ ಮನೆಗೆ ವಾಪಸಾದಾಗ ಅವರಿನ್ನೂ ಮರಳಿ ಬಂದಿಲ್ಲ ಎಂದು ಆರರ ಹರೆಯದ ಪುತ್ರ ಓಂ ತಿಳಿಸಿದ್ದ. ಗೊಂಡ್ಗೆಯ ಸಹಚರರು ಹುಡುಕಾಟ ನಡೆಸಿದರೂ ತಾಯಿ-ಮಗು ಪತ್ತೆಯಾಗಿರಲಿಲ್ಲ. ಬಳಿಕ ಗೊಂಡ್ಗೆ ರುಪಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಸ್ಥಳೀಯ ಪೊಲೀಸರ ತನಿಖಾ ವೈಖರಿಯಿಂದ ನಿರಾಶರಾಗಿರುವ ಗೊಂಡ್ಗೆ ಇದೀಗ ನೆರವಿಗಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಮೊರೆ ಹೋಗಿದ್ದಾರೆ.

ಸ್ವಪ್ನಾರನ್ನು ಅವರ ಕ್ವಾರ್ಟರ್ಸ್‌ನಿಂದ ಎರಡು ಕಿ.ಮೀ. ದೂರಲ್ಲಿರುವ ಸೇನಾ ನೆಲೆಗೆ ಕಳುಹಿಸಲಾಗಿತ್ತು ಮತ್ತು ಆ ಸಮಯದಲ್ಲಿ ಮಳೆ ಬೀಳುತ್ತಿದ್ದರಿಂದ ಹಾಗೂ ಆಕೆಯೊಂದಿಗೆ ಪುಟ್ಟ ಮಗುವಿದ್ದರಿಂದ ಓಮ್ನಿ ವಾಹನವೊಂದರಲ್ಲಿ ಲಿಫ್ಟ್ ಪಡೆಯುವಂತೆ ಅಲ್ಲಿಯ ಸಿಬ್ಬಂದಿ ಸೂಚಿಸಿದ್ದರು ಎನ್ನುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಇಡೀ ಘಟನಾವಳಿಯು ಸೇನಾ ನೆಲೆಯಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಗೊಂಡ್ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News