ಜನತೆಯೆಡೆಗೆ ನಮ್ಮ ನಡಿಗೆ’: ಕರಪತ್ರವನ್ನು ಬಿಡುಗಡೆ

Update: 2017-10-19 17:52 GMT

ಮಂಗಳೂರು, ಅ. 19: ಸಿಪಿಐಎಂ ನೇತೃತ್ವದಲ್ಲಿ ‘ಸೌಹಾರ್ದದಿಂದ ಅಭಿವೃದ್ಧಿಯೆಡೆಗೆ’ ಎಂಬ ಘೋಷಣೆಯೊಂದಿಗೆ ಡಿಸೆಂಬರ್‌ನಲ್ಲಿ ಜರಗಲಿರುವ ‘ಜನತೆಯೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದ ಕರಪತ್ರವನ್ನು ನಗರದ ಸಿಪಿಎಂ ಕಚೇರಿಯಲ್ಲಿ ಗುರುವಾರ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ದ.ಕ. ಜಿಲ್ಲಾ ಸಮಿತಿ ಸದಸ್ಯ ವಾಸುದೇವ ಉಚ್ಚಿಲ್ ಶಾಂತಿ ಸೌಹಾರ್ದತೆಯ ಬೀಡಾಗಿದ್ದ ಮಂಗಳೂರು ನಗರಕ್ಕೆ ಭಾರೀ ಚರಿತ್ರೆ ಇದೆ. ಇಲ್ಲಿನ ಶ್ರಮಜೀವಿಗಳು ಕಷ್ಟಪಟ್ಟು ದುಡಿದು ಸೌಹಾರ್ದವನ್ನು ನೆಲೆಗೊಳಿಸಲು ಅವಿರತವಾಗಿ ಶ್ರಮಿಸುವ ಮೂಲಕ ಮಂಗಳೂರು ನಗರ ಪ್ರಸಿದ್ಧಿಯಾಗಿದೆ. ಆದರೆ ಇತ್ತೀಚಿನ ಹಲವು ವರ್ಷಗಳಲ್ಲಿ ಇಲ್ಲಿನ ಕೋಮುವಾದಿ ಶಕ್ತಿಗಳು ಮಂಗಳೂರನ್ನು ಪ್ರಯೋಗ ಶಾಲೆಯನ್ನಾಗಿಸಿ, ಕೋಮುಜ್ವಾಲೆಯನ್ನು ಹಬ್ಬಿಸಿ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿವೆ.

ಮಾತ್ರವಲ್ಲದೆ ತುಳುನಾಡಿನ ಸಂಸ್ಕೃತಿಯನ್ನು ನಾಶ ಪಡಿಸುವ ಮೂಲಕ ಭಯದ ವಾತಾವರಣವನ್ನು ನಿರ್ಮಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೆ ಸೌಹಾರ್ದವನ್ನು ನೆಲೆಗೊಳಿಸಲು ಹಾಗೂ ಮಂಗಳೂರನ್ನು ಸೌಹಾರ್ದ ತಾಣವನ್ನಾಗಿಸಲು ಸಿಪಿಎಂ ಕಂಕಣಬದ್ಧವಾಗಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸ್ವಚ್ಛ, ಸುಂದರ, ಸಮೃದ್ಧ, ಸೌಹಾರ್ದ ಮಂಗಳೂರಿನ ನಿರ್ಮಾಣ ಸಿಪಿಎಂನ ಕನಸಾಗಿದೆ ಎಂದರು.ವೇದಿಕೆಯಲ್ಲಿ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ಸದಸ್ಯರಾದ ಯೋಗೀಶ್ ಜಪ್ಪಿನಮೊಗರು, ಸಂತೋಷ್ ಶಕ್ತಿನಗರ, ದಿನೇಶ್ ಶೆಟ್ಟಿ, ಪ್ರೇಮನಾಥ ಜಲ್ಲಿಗುಡ್ಡೆ, ಭಾರತಿ ಬೋಳಾರ್ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News