ಯೂರಿಯಾ ಕೊರತೆಯ ಸಮಸ್ಯೆ ನಿವಾರಣೆಯಾಗಲಿದೆ: ಚನಿಲ

Update: 2017-10-19 18:11 GMT

ಪುತ್ತೂರು, ಅ. 19: ಕೃಷಿಗೆ ಯೂರಿಯಾ ಕೊರತೆಯಿಂದಾಗಿ ಕಳೆದ ಒಂದೂವರೆ ತಿಂಗಳಿನಿಂದ ಜಿಲ್ಲೆಯ ರೈತರ ಕಂಗಾಲಾಗಿದ್ದು, ಇದನ್ನು ಮನಗಂಡ ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಖಾತೆಯ ಸಚಿವರಾದ ಅನಂತಕುಮಾರ್ ಮಧ್ಯಪ್ರವೇಶಿಸಿ ಯೂರಿಯಾ ಸಮಸ್ಯೆಯನ್ನು ನಿವಾರಣೆ ಮಾಡಿದ್ದಾರೆ ಎಂದು ಪುತ್ತೂರು ಮಂಡಲದ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ತಿಳಿಸಿದ್ದಾರೆ.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯಲ್ಲಿ ರೈತರಿಗೆ ಬೇಕಾದ ಯೂರಿಯಾ ರಸಗೊಬ್ಬರದ ಕೃತಕ ಅಭಾವ ಉಂಟಾಗಿದ್ದು, ಯೂರಿಯಾ ಕೊರತೆಯಿಂದ ರೈತರು ಬವಣೆ ಪಡುತ್ತಿದ್ದರು. ಜಿಲ್ಲೆಯ ಎಲ್ಲ ವಿತರಕರಲ್ಲಿ ಈ ಬಗ್ಗೆ ಚರ್ಚಿಸಿದರೂ ಸಮಸ್ಯೆಗೆ ಸ್ಪಂದನೆ ಸಿಕ್ಕಿರಲಿಲ್ಲ. ಈ ಸಂದರ್ಭ ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಕಾವು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನನ್ಯ ಅಚ್ಚುತ ಮೂಡೆತ್ತಾಯ ಹಾಗೂ ಸಹಕಾರಿ ಧುರೀಣ ಕಂಟ್ರಮಜಲು ಭಾಸ್ಕರ ರೈ ಅವರು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಗಮನಕ್ಕೆ ತರಲಾಗಿತ್ತು. ಸಂಸದರು ಅಕ್ಟೋಬರ್ 16ರಂದು ಮಂಗಳೂರಿಗೆ ಆಗಮಿಸಿದ್ದ ಕೇಂದ್ರ ಸಚಿವ ಅನಂತ ಕುಮಾರ್ ಅವರನ್ನು ಭೇಟಿ ನೀಡಿ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದರು.

ಈ ಸಂದರ್ಭದಲ್ಲಿ ದೇಶದಲ್ಲಿ ಎಲ್ಲಿಯೂ ಯುರಿಯಾ ಕೊರತೆಯಿಲ್ಲ. ಕರ್ನಾಟಕಕ್ಕೆ ಒಂದು ಲಕ್ಷ ಟನ್ ಯೂರಿಯಾ ಪೂರೈಕೆಯಾಗಿದೆ ಎಂದು ಹೇಳಿದ ಸಚಿವರು, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಕ್ರಮಕ್ಕೆ ಸೂಚಿಸಿದರು. ಯಾವುದೇ ರೈತರಿಗೆ ರಸಗೊಬ್ಬರದ ಅಲಭ್ಯತೆ ಆಗದಂತೆ ನೋಡಿಕೊಳ್ಳಬೇಕು. ಬೇಡಿಕೆದಾರರಿಗೆ ಸೂಕ್ತ ದರದಲ್ಲಿ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಇದರ ಬೆನ್ನಲ್ಲೇ ಜಂಟಿ ಕೃಷಿ ನಿರ್ದೇಶಕರು ಕಾರ್ಯ ಪ್ರವೃತ್ತರಾಗಿದ್ದು, ಯೂರಿಯಾ ಪೂರೈಕೆ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ರಾಸಾಯನಿಕ ಗೊಬ್ಬರ ಕಾರ್ಖಾನೆಗಳು ಒಂದು ಗೊಬ್ಬರವನ್ನು ರೈತರ ಬೇಡಿಕೆಗಳಿಲ್ಲದ ಇನ್ನೊಂದು ಗೊಬ್ಬರದ ಜೊತೆ ಸೇರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ. ಯೂರಿಯಾ ಬೇಕಾದ ರೈತರು ಈ ಗೊಬ್ಬರವನ್ನೂ ಕೊಳ್ಳಲೇಬೇಕೆಂದು ಶರತ್ತು ವಿಧಿಸುತ್ತಿದ್ದಾರೆ ಎಂಬ ಅಂಶವನ್ನು ಸಚಿವರ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದ ಅವರು ರಾಸಾಯನಿಕ ಗೊಬ್ಬರ ವಿತರಣೆ ಮಾಡುತ್ತಿರುವ ಸಹಕಾರಿ ಸಂಘಗಳು ತಮ್ಮ ಬೇಡಿಕೆಗಳಿಗೆ ಡೀಲರ್‌ಗಳು ಸ್ಪಂದಿಸದಿದ್ದಲ್ಲಿ ಜಂಟಿ ಕೃಷಿ ನಿರ್ದೇಶಕರನ್ನು ಸಂಪರ್ಕಿಸಲಿ. ಅವರು ತಕ್ಷಣ ಸ್ಪಂದಿಸುತ್ತಾರೆ ಎಂದು ಸಂದರು ತಿಳಿಸಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾವು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಸಹಕಾರಿ ಮುಖಂಕಂಟ್ರಮಜಲು ಭಾಸ್ಕರ ರೈ ಮತ್ತು ನಗರಸಭಾ ಸದಸ್ಯ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News