​ಮಹಿಳೆಯಿಂದ ಲಕ್ಷಾಂತರ ರೂ. ವಂಚನೆ

Update: 2017-10-19 18:17 GMT

ಉಡುಪಿ, ಅ.19: ಸಾಮಾಜಿಕ ಜಾಲತಾಣವೊಂದರಲ್ಲಿ ಪರಿಚಿತರಾದ ಮಹಿಳೆಯೊಬ್ಬರ ನಯವಂಚನೆಯ ಮಾತುಗಳಿಗೆ ಬಲಿಬಿದ್ದ ಅಂಬಲಪಾಡಿಯ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡಿರುವ ಘಟನೆ ವರದಿಯಾಗಿದೆ.

ಅಂಬಲಪಾಡಿಯ ಸಂಜೀವ ಬಳ್ಕೂರು (56) ಎಂಬವರಿಗೆ ಸಾಮಾಜಿಕ ಜಾಲತಾಣದಲ್ಲಿ ಲೀಸಾಕೋಲ್ ಎಂಬ ‘ವಿದೇಶಿ’ ಹುಡುಗಿಯ ಪರಿಚಯವಾಗಿತ್ತು. ಸೆ.13ರಂದು ತಾನು ಲಂಡನ್‌ನಿಂದ ಹೊಸದಿಲ್ಲಿಗೆ ಬರುವಾಗ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳಿಂದ ವಿಚಾರಣೆಗೊಳಗಾಗಿದ್ದು, ತಾನು ಭಾರತದಲ್ಲಿ ಚಿನ್ನಾಭರಣಗಳ ಖರೀದಿಗೆಂದು ತಂದಿರುವ 100 ಸಾವಿರ ಪೌಂಡ್ಸ್ ಮೊತ್ತದ ಚೆಕ್‌ನ್ನು ಕ್ಲಿಯರೆನ್ಸ್ ಮಾಡಲು 42,500ರೂ. ಭರಿಸುವಂತೆ ವಿನಂತಿಸಿದ್ದು, ಅದರಂತೆ ಅವರು ಇಂಟರ್‌ನೆಟ್ ಬ್ಯಾಂಕಿಂಗ್ ಹಾಗೂ ಚೆಕ್ ಮೂಲ 42,500ರೂ. ಆಕೆ ತಿಳಿಸಿದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು.

ಮರುದಿನ (ಸೆ.14) ಹೊಸದಿಲ್ಲಿ ವಿಮಾನ ನಿಲ್ದಾಣದಿಂದ ಕಸ್ಟಮ್ ಅಧಿಕಾರಿ ಎಂದು ಹೇಳಿ ವ್ಯಕ್ತಿಯೊಬ್ಬ ಕರೆ ಮಾಡಿ ಲೀಸಾಕೋಲ್‌ರ ತಂದಿರುವ ಡಿಡಿಯನ್ನು ಭಾರತೀಯ ರೂಪಾಯಿಗೆ ವರ್ಗಾವಣೆ ಮಾಡಲು ದಿಲ್ಲಿ ಹೈಕೋರ್ಟ್ ತಪಾಸಣೆಗೆ 75,000 ಹಣವನ್ನು ಕೂಡಲೇ ವರ್ಗಾವಣೆ ಮಾಡುವಂತೆ ತಿಳಿಸಿದಂತೆ ಇವರು ಚೆಕ್ ಮೂಲಕ ಹಣವನ್ನು ಕಳಹಿಸಿದ್ದರು. ಸೆ.15ರಂದು ಮತ್ತೊಮ್ಮೆ ಇದೇ ರೀತಿ ತೆರಿಗೆ ಪಾವತಿಸಲು ಎಂದು 20,000 ರೂ. ಅನ್ನು ಎಟಿಎಂ ಮೂಲಕ ಕಳುಹಿಸಿದ್ದರು.

ಆದರೆ ಇದಾದ ಬಳಿಕ ಆರೋಪಿ, ಸಂಜೀವ ಬಳ್ಕೂರು ಅವರ ಯಾವುದೇ ಸಂಪರ್ಕಕ್ಕೆ ಸಿಗದೇ ಹಾಗೂ ಅವರಿಂದ ಪಡೆದ ಒಟ್ಟು 1,37,500 ರೂ. ಗಳನ್ನು ಮರುಪಾವತಿಸದೇ ವಂಚಿಸಿರುವುದಾಗಿ ಇದೀಗ ಉಡುಪಿ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News