ಬಂಟ್ವಾಳ: ಅ.22ರಂದು ಸಿಎಂ ಸಿದ್ದರಾಮಯ್ಯರಿಂದ ನಗರ ಸಂಚಾರ

Update: 2017-10-20 13:07 GMT

ಬಂಟ್ವಾಳ, ಅ. 20: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅ.22ರಂದು ಬಂಟ್ವಾಳಕ್ಕೆ ಆಗಮಿಸಲಿದ್ದು ಬಸ್‍ ಮೂಲಕ ನಗರ ಸಂಚಾರ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.

ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಟ್ವಾಳ ಕ್ಷೇತ್ರದಲ್ಲಾದ ಸುಮಾರು 252ಕೋ. ರೂ. ವೆಚ್ಚದ  ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುನ್ನ ಬಸ್‍ನಲ್ಲಿಯೇ ಸ್ಥಳಕ್ಕೆ ತೆರಳಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಲಿದ್ದಾರೆ ಎಂದರು.

ಮೇಲ್ದರ್ಜೆಗೇರಿದ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ, 2ನೇ ಹಂತದ ಕುಡಿಯುವ ನೀರಿನ ಯೋಜನೆ, ಟ್ರೀ ಪಾರ್ಕ್, ನೂತನ ಪ್ರವಾಸಿ ಮಂದಿರವನ್ನು ಉದ್ಘಾಟಿಸಿ, ಪಂಜೆಮಂಗೇಶರಾವ್ ಅವರ ಸ್ಮಾರಕ ಭವನಕ್ಕೆ ಶಿಲಾನ್ಯಾಸ ನೆರವೇರಿಸುವರು. ಬಳಿಕ ಮಿನಿವಿಧಾನ ಸೌಧ, ಮೆಸ್ಕಾಂ ಕಚೇರಿ ಕಟ್ಟಡ, ಕೆಎಸ್ಸಾರ್ಟಿಸಿ ಬಸ್‍ನಿಲ್ದಾಣ ಉದ್ಘಾಟಿಸಿ ಬಳಿಕ ಸಭಾಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಮುಲ್ಲಾರಪಟ್ಣದಲ್ಲಿ ಕಿಂಡಿ ಅಣೆಕಟ್ಟು, ನರಿಕೊಂಬು-ಮಾಣಿ-ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಸುಮಾರು 31 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅಜಿಲಮೊಗರು ದರ್ಗಾ ಹಾಗೂ ಕಡೇಶಿವಾಲಯ ದೇವಸ್ಥಾನಕ್ಕೆ ಸಂಪರ್ಕ ಕೊಂಡಿಯಾಗಿ ನೇತ್ರಾವತಿ ನದಿಯ ನಡುವೆ ಸೌಹಾರ್ದ ಸೇತುವೆಗೆ ಶಿಲಾನ್ಯಾಸ ನೆರವೇರಲಿದೆ ಎಂದರು.

ಸಮಾರಂಭದ ಪ್ರಯುಕ್ತ ಅಂದು ಸಂಜೆಯಿಂದ ರಾತ್ರಿ 8ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ. ಮಧ್ಯಾಹ್ನ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಈ  ಸಮಾರಂಭದಲ್ಲಿ ಸುಮಾರು ಹತ್ತು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು. 

ಪುರಸಭಾವ್ಯಾಪ್ತಿಯಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಒಳಚರಂಡಿ ಯೋಜನೆ, 10ಕೋಟಿ ರೂ.ವೆಚ್ಚದಲ್ಲಿ ಬೆಂಜನಪದವಿನಲ್ಲಿ ತಾಲೂಕು ಕ್ರೀಡಾಂಗಣ ಅನುಷ್ಠಾನಗೊಳ್ಳಲಿದೆ. ಹಾಗೆಯೇ ಸಿಆರ್‍ಎಫ್ ಯೋಜನೆಯಡಿ ವಿವಿಧ ರಸ್ತೆ ಅಭಿವೃದ್ಧಿಗೆ 30 ಕೋಟಿ ರೂ. ಮಂಜೂರು ಆಗಿದ್ದು, ಶೀಘ್ರದಲ್ಲಿ ಇದರ ಶಂಕುಸ್ಥಾಪನೆ ನೆರವೇರಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಾಯಿಲಪ್ಪ ಸಾಲಿಯಾನ್, ಅಬ್ಬಾಸ್ ಅಲಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್  ನಂದರಬೆಟ್ಟು, ಸದಸ್ಯರಾದ ಪ್ರವೀಣ್, ಜಗದೀಶ್ ಕುಂದರ್, ಜಿಪಂ ಸದಸ್ಯ ಶಾಹುಲ್ ಹಮೀದ್,   ತಹಶೀಲ್ದಾರ್ ಪುರಂದರ ಹೆಗ್ಡೆ, ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News