×
Ad

1959ರಲ್ಲಿ ಚೀನಿ ಗುಂಡುಗಳಿಗೆ ಬಲಿಯಾಗಿದ್ದ ಪೊಲೀಸರಿಗೆ ನಾಳೆ ರಾಷ್ಟ್ರದ ನಮನ

Update: 2017-10-20 20:15 IST

ಹೊಸದಿಲ್ಲಿ,ಅ.20: 1959ರಲ್ಲಿ ಚೀನಿ ಸೈನಿಕರ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದ 10 ಪೊಲೀಸರು ಮತ್ತು ಭಾರತದ ಅಖಂಡತೆಯನ್ನು ರಕ್ಷಿಸಲು ತಮ್ಮ ಬಲಿದಾನವನ್ನು ಮಾಡಿರುವ ಇತರ 34,418 ಪೊಲೀಸರಿಗೆ ಶನಿವಾರ ಇಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ದೇಶವು ಗೃಹಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಶ್ರದ್ಧಾಂಜಲಿಗಳನ್ನು ಸಲ್ಲಿಸಲಿದೆ.

1959ರಲ್ಲಿ ಚೀನಾದೊಂದಿಗಿನ ಭಾರತದ ಗಡಿಯ ರಕ್ಷಣೆ ಸಂದರ್ಭ ತಮ್ಮ ಬಲಿದಾನ ನೀಡಿದ್ದ 10 ಯೋಧರ ಸ್ಮರಣಾರ್ಥ ಪ್ರತಿವರ್ಷ ಅ.21ನ್ನು ‘ಪೊಲೀಸ್ ಹುತಾತ್ಮರ ದಿನ’ವನ್ನಾಗಿ ಆಚರಿಸಲಾಗುತ್ತಿದೆ ಎಂದು ಗೃಹ ಸಚಿವಾಲಯವು ಶುಕ್ರವಾರ ಹೇಳಿಕೆ ಯೊಂದರಲ್ಲಿ ತಿಳಿಸಿದೆ.

1959ರವರೆಗೂ ಟಿಬೆಟ್‌ನೊಂದಿಗಿನ 2,500 ಮೈಲು ಉದ್ದದ ಭಾರತದ ಗಡಿಯನ್ನು ಪೊಲೀಸ್ ಸಿಬ್ಬಂದಿಗಳೇ ಕಾಯುತ್ತಿದ್ದರು. 1959,ಅ.20ರಂದು ಲಾನಕ್ ಲಾಗೆ ತೆರಳುತ್ತಿದ್ದ ಭಾರತೀಯ ತಂಡವೊಂದರ ಮುಂದಿನ ಪ್ರಯಾಣದ ಸಿದ್ಧತೆಗಳಿಗಾಗಿ ಲಡಾಖ್‌ನ ಹಾಟ್ ಸ್ಪ್ರಿಂಗ್ಸ್‌ನಿಂದ ಮೂರು ಪೊಲೀಸ್ ತಂಡಗಳನ್ನು ರವಾನಿಸಲಾಗಿತ್ತು. ಎರಡು ತಂಡಗಳು ಹಾಟ್ ಸ್ಪ್ರಿಂಗ್ಸ್‌ಗೆ ಮರಳಿದ್ದರೂ ಇಬ್ಬರು ಪೊಲೀಸರು ಮತ್ತು ಓರ್ವ ಕೂಲಿಯನ್ನೊಳಗೊಂಡಿದ್ದ ಮೂರನೇ ತಂಡ ವಾಪಸಾಗಿರಲಿಲ್ಲ. ನಾಪತ್ತೆಯಾಗಿದ್ದ ಅವರ ಶೋಧಕ್ಕಾಗಿ ಅ.21ರಂದು ಹಿರಿಯ ಅಧಿಕಾರಿ ಕರಮ್ ಸಿಂಗ್ ನೇತೃತ್ವದಲ್ಲಿ 20 ಪೊಲೀಸರ ತಂಡವು ತೆರಳಿತ್ತು. ಸಿಂಗ್ ಅಶ್ವಾರೂಢರಾಗಿದ್ದರೆ, ಇತರರು ಕಾಲ್ನಡಿಗೆಯಿಂದ ಅವರನ್ನು ಹಿಂಬಾಲಿಸುತ್ತಿದ್ದರು. ಮಧ್ಯಾಹ್ನದ ವೇಳೆಗೆ ಗುಡ್ಡವೊಂದರ ತುದಿಯಲ್ಲಿ ಕಾಣಿಸಿಕೊಂಡಿದ್ದ ಚೀನಿ ಸೈನಿಕರು ಭಾರತೀಯ ಪೊಲೀಸರತ್ತ ಗುಂಡುಗಳನ್ನು ಹಾರಿಸಿ ಗ್ರೆನೇಡ್‌ಗಳನ್ನು ಎಸೆದಿದ್ದರು. ಪೊಲೀಸರು ರಕ್ಷಣೆ ಪಡೆದುಕೊಳ್ಳಲು ಅವಕಾಶವೇ ಇಲ್ಲದಿದ್ದರಿಂದ ಅವರ ಪೈಕಿ 10 ಜನರು ಹುತಾತ್ಮರಾಗಿದ್ದು, ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದರು.

ಮೃತ 10 ಪೊಲೀಸರ ಮೃತದೇಹಗಳನ್ನು ಚೀನಾ ಘಟನೆ ನಡೆದ ಮೂರು ವಾರಗಳ ಬಳಿಕ ಅಂದರೆ 1959,ನ.13ರಂದು ಭಾರತಕ್ಕೆ ಮರಳಿಸಿತ್ತು. ಸಂಪೂರ್ಣ ಪೊಲೀಸ್ ಗೌರವದೊಂದಿಗೆ ಹಾಟ್ ಸ್ಪ್ರಿಂಗ್ಸ್‌ನಲ್ಲಿ ಈ ಶವಗಳ ಅಂತ್ಯಸಂಸ್ಕಾರ ನಡೆಸಲಾಗಿತ್ತು.

1960,ಜನವರಿಯಲ್ಲಿ ನಡೆದಿದ್ದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಮುಖ್ಯಸ್ಥರ ವಾರ್ಷಿಕ ಸಮ್ಮೇಳನವು ಹುತಾತ್ಮ ಪೊಲೀಸರ ಗೌರವಾರ್ಥ ರಾಷ್ಟ್ರಾದ್ಯಂತ ಎಲ್ಲ ಪೊಲೀಸ್ ಲೈನ್‌ಗಳಲ್ಲಿ ಅ.21ನ್ನು ‘ಹುತಾತ್ಮರ ದಿನ’ವನ್ನಾಗಿ ಆಚರಿಸಲು ನಿರ್ಧರಿಸಿತ್ತು ಎಂದು ಹೇಳಿಕೆಯು ವಿವರಿಸಿದೆ.

ಹಾಟ್ ಸ್ಪ್ರಿಂಗ್ಸ್‌ನಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದ್ದು, ಪ್ರತಿ ವರ್ಷ ದೇಶದ ವಿವಿಧ ಭಾಗಗಳ ಪೊಲೀಸ್ ಸಿಬ್ಬಂದಿಗಳು ಅಲ್ಲಿಗೆ ತೆರಳಿ ಹುತಾತ್ಮರಿಗೆ ಗೌರವಗಳನ್ನು ಸಲ್ಲಿಸು ತ್ತಾರೆ.

ಸ್ವಾತಂತ್ರಾನಂತರ ದೇಶದ ಅಖಂಡತೆಯ ರಕ್ಷಣೆಗಾಗಿ ಮತ್ತು ದೇಶದ ಜನರಿಗೆ ಭದ್ರತೆಯನ್ನೊದಗಿಸಲು 34,418 ಪೊಲೀಸ್ ಸಿಬ್ಬಂದಿಗಳು ಬಲಿದಾನ ಮಾಡಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಈ ವರ್ಷದ ಆಗಸ್ಟ್‌ವರೆಗೆ 338 ಪೊಲೀಸ್ ಸಿಬ್ಬಂದಿಗಳು ಕರ್ತವ್ಯದ ಸಂದರ್ಭದಲ್ಲಿ ಹುತಾತ್ಮರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News