ಸಾಲಿಗ್ರಾಮ ಪ.ಪಂಚಾಯತ್ ಎದುರು ನಿವೇಶನರಹಿತರ ಪ್ರತಿಭಟನೆ

Update: 2017-10-20 15:51 GMT

ಸಾಲಿಗ್ರಾಮ, ಅ.20: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮನೆ, ನಿವೇಶನ ರಹಿತರ ಭೂಮಿ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಪಟ್ಟಣ ಪಂಚಾಯತ್ ಕಚೇರಿ ಎದುರು ಧರಣಿ ಕಾರ್ಯಕ್ರಮವು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ತಾಲೂಕು ಸಮಿತಿ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.

ಪ್ರತಿಭಟನಾ ಮೆರವಣಿಗೆಗೆ ಮುನ್ನ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಾಲ್ಕು ಗ್ರಾಮಗಳ ಬಡನಿವೇಶನ ರಹಿತರ ಸಮಾವೇಶವು ಸಾಲಿಗ್ರಾಮ ಗಣೇಶ ಕೃಪ ಕಲ್ಯಾಣ ಮಂಟಪದಲ್ಲಿ ಜರಗಿತು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಯು. ದಾಸಂಡಾರಿ ನಿವೇಶನ ರಹಿತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರಿಂದ ನಿವೇಶನ ಕೋರಿಕೆ ಅರ್ಜಿ ಸ್ವೀಕರಿಸಿ ಪಟ್ಟಣ ಪಂಚಾಯತ್‌ಗೆ ಹಸ್ತಾಂತರಿಸಿ ವರ್ಷ ಕಳೆದರೂ ನಿವೇಶನ ರಹಿತರ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಅಂತಿಮ ಗೊಳಿಸದಿರುವ ಮುಖ್ಯಾಧಿಕಾರಿಗಳ ಅಸಡ್ಡೆಯನ್ನು ತೀವ್ರವಾಗಿ ಖಂಡಿಸಿದರು.

 ಬಳಿಕ ಸಾಲಿಗ್ರಾಮ ಪಟ್ಟಣ ಪಂಚಾಯತ್ ಎದುರು ಪ್ರತಿಭಟನಕಾರ ರನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ವಸತಿ ಸಮಿತಿಯ ಮೂಲಕ ನಿವೇಶನ ರಹಿತರ ಅರ್ಜಿಗಳನ್ನು ತನಿಖೆ ನಡೆಸಿ ಮುಂದಿನ ಮೂರು ತಿಂಗಳೊಳಗೆ ಅರ್ಹ ಫಲಾನುವಿಗಳ ನಿವೇಶನ ರಹಿತರ ಅಂತಿಮ ಪಟ್ಟಿ ಸಿದ್ಧಪಡಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.

ನಂತರ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳಿಗೆ, ಬೇಡಿಕೆಗಳ ಮನವಿ ಪತ್ರ ಹಸ್ತಾಂತರಿಸಲಾಯಿತು. ಮುಂದಿನ ಮೂರು ತಿಂಗಳೊಳಗೆ ನಿವೇಶನ ರಹಿತರ ಅಂತಿಮ ಪಟ್ಟಿ ಸಿದ್ಧಪಡಿಸಲಾಗುವುದು ಎಂದು ಅಧಿಕಾರಿಗಳು ನೀಡಿದ ಭರವಸೆ ಮೇರೆಗೆ ಪ್ರತಿಟನೆಯನ್ನು ಹಿಂಪಡೆಯಲಾಯಿತು.

 ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು. ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಕವಿರಾಜ, ಪಿ.ವಿಶ್ವನಾಥ ರೈ, ಎಚ್. ವಿಠಲ ಪೂಜಾರಿ, ರಾಜೀವ ಪಡುಕೋಣೆ, ಮಾಧವ ಸಾಲಿಗ್ರಾಮ, ರಾಮ ಕಾರ್ಕಡ, ಉಮೇಶ ಕುಂದರ್, ನಳಿನಿ ಎಸ್. ಶಾರದ ಕಾರ್ಕಡ, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News