×
Ad

ಮ್ಯಾನ್ಮಾರ್‌ನಲ್ಲಿ ಯುದ್ಧಾಸ್ತ್ರವಾಗಿ ‘ಅತ್ಯಾಚಾರ’

Update: 2017-10-20 21:35 IST

ಕಾಕ್ಸ್ ಬಝಾರ್ (ಬಾಂಗ್ಲಾದೇಶ), ಅ. 20: ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ರೊಹಿಂಗ್ಯಾ ಬಿಕ್ಕಟ್ಟಿನಲ್ಲಿ ‘ಅತ್ಯಾಚಾರ’ವನ್ನು ಯುದ್ಧಾಸ್ತ್ರವಾಗಿ ಬಳಸಲಾಗುತ್ತಿದೆ ಹಾಗೂ ಈ ಲೈಂಗಿಕ ದಾಳಿಯ ಅಪಾಯದಿಂದ ಯಾವುದೇ ಮಹಿಳೆ ಸುರಕ್ಷಿತವಾಗಿಲ್ಲ ಎಂದು ವೀಕ್ಷಕರು ಹೇಳಿದ್ದಾರೆ.

ಮ್ಯಾನ್ಮಾರ್ ಸೇನೆಯ ದೌರ್ಜನ್ಯಕ್ಕೆ ಹೆದರಿ ಕಳೆದ ಎರಡು ತಿಂಗಳಲ್ಲಿ 5 ಲಕ್ಷಕ್ಕಿಂತಲೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಅವರ ಪೈಕಿ ಹಲವಾರು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವೈದ್ಯರು ಹೇಳುತ್ತಾರೆ.

ಮನೆಗಳನ್ನು ತೊರೆದು ಪರಾರಿಯಾಗುವ ಸಂದರ್ಭಗಳಲ್ಲಿ ತಮ್ಮ ಮೇಲೆ ಮ್ಯಾನ್ಮಾರ್ ಸೈನಿಕರು ಹಿಂಸಾತ್ಮಾಕ ಅತ್ಯಾಚಾರ ನಡೆಸಿದ್ದಾರೆ ಎಂಬುದಾಗಿ ಹಲವಾರು ರೊಹಿಂಗ್ಯಾ ಮಹಿಳೆಯರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

‘‘ರೊಹಿಂಗ್ಯಾ ಮುಸ್ಲಿಮರ ಜನಾಂಗೀಯ ನಿರ್ಮೂಲನೆಯ ಗುರಿಯನ್ನು ಸಾಧಿಸಲು ಬರ್ಮ ಸೇನೆಯು ಅತ್ಯಾಚಾರವನ್ನು ಒಂದು ಅಸ್ತ್ರವನ್ನಾಗಿ ಬಳಸುತ್ತಿರುವುದು ಸ್ಪಷ್ಟವಾಗಿದೆ’’ ಎಂದು ಮಾನವ ಹಕ್ಕುಗಳ ಸಂಘಟನೆ ‘ಹ್ಯೂಮನ್ ರೈಟ್ಸ್ ವಾಚ್’ನಲ್ಲಿ ಲೈಂಗಿಕ ಹಿಂಸೆ ವಿಚಾರದ ಪರಿಣಿತೆ ಸ್ಕೈ ವೀಲರ್ ಹೇಳುತ್ತಾರೆ.

‘‘ಅತ್ಯಾಚಾರ ಮತ್ತು ಇತರ ಮಾದರಿಯ ಲೈಂಗಿಕ ಹಿಂಸಾಚಾರ ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮೇಲೆ ವ್ಯಾಪಕವಾಗಿ ನಡೆಯುತ್ತಿದೆ. ಇದು ವ್ಯವಸ್ಥಿತವಾಗಿ, ಅಮಾನುಷವಾಗಿ, ಅವಮಾನಕರ ಹಾಗೂ ಆಘಾತಕಾರಿಯಾಗಿ ನಡೆಯುತ್ತಿದೆ’’ ಎಂದು ಅವರು ‘ರಾಯ್ಟರ್ಸ್’ಗೆ ಹೇಳಿದರು.

9 ತಿಂಗಳ ಗರ್ಭಿಣಿಯನ್ನೂ ಸಾಮೂಹಿಕ ಅತ್ಯಾಚಾರ ಮಾಡಿದರು

ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ತನ್ನನ್ನು ಮ್ಯಾನ್ಮಾರ್‌ನ ಮನೆಯಲ್ಲಿ ಸೈನಿಕರು ಭೀಕರವಾಗಿ ಅತ್ಯಾಚಾರ ಮಾಡಿದರು ಎಂದು ಜಾನೆಟ್ ಎಂಬವರು ಹೇಳಿದರು.

‘‘ಸೈನಿಕರು ನಮ್ಮ ಗ್ರಾಮದ ಮೇಲೆ ದಾಳಿ ನಡೆಸುವ ಐದು ದಿನಗಳ ಮುನ್ನ ನನ್ನ ಗಂಡ ಮೃತಪಟ್ಟರು. ಅಂದಿನಿಂದ ನಮ್ಮ ಮೂರು ಮಕ್ಕಳು ಎಲ್ಲಿದ್ದಾರೆಂದೇ ಗೊತ್ತಿಲ್ಲ’’ ಎಂದು ಐದು ದಿನಗಳ ಶಿಶು ಫಾತಿಮಾಳನ್ನು ತೂಗುತ್ತಾ ಹೇಳಿದರು.

ಅವರು ಈಗ ಬಾಂಗ್ಲಾದೇಶದ ಕಾಕ್ಸ್ ಬಝಾರ್‌ನ ಡೇರೆಯೊಂದರಲ್ಲಿ ವಾಸಿಸುತ್ತಿದ್ದಾರೆ.

ಅವರು ಫಾತಿಮಾಳನ್ನು ಹೆತ್ತಿದ್ದು ಭತ್ತದ ಗದ್ದೆಯೊಂದರಲ್ಲಿ. ಈಗ ಫಾತಿಮಾ ಮಾತ್ರ ಜಾನೆಟ್‌ರ ಉಳಿದಿರುವ ಏಕೈಕ ಕುಟುಂಬ ಸದಸ್ಯೆ.

ಬರ್ಮಾ ಸೇನೆಯು ಫಕೀರ ಬಝಾರ್ ಗ್ರಾಮಕ್ಕೆ ಬಂದಾಗ ತುಂಬು ಗರ್ಭಿಣಿಯಾಗಿದ್ದ ತಾನು ಮನೆಯಲ್ಲಿ ಒಂಟಿಯಾಗಿದ್ದೆ ಎಂದು ಜಾನೆಟ್ ಹೇಳಿದರು. ಗ್ರಾಮದ ಎಲ್ಲರೂ ಕಾಡಿಗೆ ಓಡಿದರೆ, 22 ವರ್ಷದ ಜಾನೆಟ್ ಮನೆಯಲ್ಲಿ ಅವಿತುಕೊಂಡರು.

‘‘ಹಲವಾರು ಸೈನಿಕರು ಬಾಗಿಲನ್ನು ಒಡೆದರು. ನಾನು ಗರ್ಭಿಣಿಯಾಗಿರುವುದನ್ನು ಅವರು ನೋಡಿದರು. ಆದರೂ, ಅವರೆಲ್ಲರೂ ನನ್ನ ಮೇಲೆ ಅತ್ಯಾಚಾರಗೈದರು’’ ಎಂದರು.

ಸೈನಿಕರು ಜಾನೆಟ್‌ಗೆ ಹೊಡೆದು ನಗ್ನವಾಗಿ ಬಿಟ್ಟುಹೋದರು. ಆಕೆಯ ಮಕ್ಕಳು ನಾಪತ್ತೆಯಾಗಿದ್ದರು.

‘‘ನನ್ನ ಮಕ್ಕಳಿಗಾಗಿ ಕೂಗಿದೆ, ಚೀರಿದೆ. ಆದರೆ, ಅವರೆಲ್ಲಿದ್ದಾರೆ ಎನ್ನುವುದು ಈಗಲೂ ನನಗೆ ಗೊತ್ತಿಲ್ಲ’’ ಎಂದು ಜಾನೆಟ್ ಹೇಳುತ್ತಾರೆ.

‘‘ನಾನು ಇನ್ನೆಂದೂ ಮ್ಯಾನ್ಮಾರ್‌ಗೆ ಹೋಗಲು ಬಯಸುವುದಿಲ್ಲ... ನಾನೆಲ್ಲವನ್ನೂ ಕಳೆದುಕೊಂಡಿದ್ದೇನೆ’’ ಎಂದು ಜಾನೆಟ್ ಹತಾಶೆಯಿಂದ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News