ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಕಾರ್ಮಿಕರನ್ನು ಮಲದ ಗುಂಡಿಗೆ ಇಳಿಸಿದ ಮತ್ತೊಂದು ಪ್ರಕರಣ ಬೆಳಕಿಗೆ

Update: 2017-10-20 17:20 GMT

ಮಂಗಳೂರು, ಅ. 20: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಂದರು ಪ್ರದೇಶದಲ್ಲಿ ಬುಧವಾರ ಕಾರ್ಮಿಕರನ್ನು ಮಲದ ಗುಂಡಿಗೆ ಇಳಿಸಿದ ಪ್ರಕರಣದ ಬೆನ್ನಲ್ಲೇ ಇಂಥದ್ದೇ ಮತ್ತೊಂದು ಪ್ರಕರಣ ಶುಕ್ರವಾರ ನಡೆದಿದೆ.

ನಗರದ ಕೋರ್ಟ್ ವಾರ್ಡ್ ವ್ಯಾಪ್ತಿಗೆ ಬರುವ ಡಾನ್ ಬಾಸ್ಕೋ ಸಭಾಂಗಣದ ಮುಂಭಾಗದಲ್ಲಿ ಕಾರ್ಮಿಕರನ್ನು ಮಲದ ಗುಂಡಿಗೆ ಇಳಿಸಲಾಗಿದೆ. ಕಾರ್ಮಿಕರ ಕಾಲಿಗೆ ಉದ್ದನೆಯ ಕಾಲ್ಚೀಲವನ್ನು ಹೊರತುಪಡಿಸಿ, ಸ್ವಚ್ಛತೆ ಕಾಪಾಡುವ ಯಾವುದೇ ವಸ್ತುವನ್ನು ನೀಡಿರಲಿಲ್ಲ. ಬುಧವಾರ ನಡೆದ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿತ್ತು. ಆದರೂ ಪಾಲಿಕೆ ಎಚ್ಚೆತ್ತುಕೊಂಡಿಲ್ಲ. ಬುಧವಾರದ ಘಟನೆಯ ಬಳಿಕ ಇನ್ನೊಂದು ಘಟನೆ ನಡೆದಿರುವುದು ಪಾಲಿಕೆಯ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ.

ಸಿಪಿಎಂ ಖಂಡನೆ: ಅ.21ರಂದು ಪ್ರತಿಭಟನೆ

ಡ್ರೈನೇಜ್ ಅವ್ಯವಸ್ಥೆಯನ್ನು ಸರಿಪಡಿಸುವ ನೆಪದಲ್ಲಿ ಡ್ರೈನೇಜ್ ಗುಂಡಿಗೆ ಕಾರ್ಮಿಕರನ್ನು ಇಳಿಸಿ ಅಮಾನವೀಯ ಕೃತ್ಯ ಮೆರೆದ ಪಾಲಿಕೆಯ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿಯು, ಅ.21ರಂದು ಬೆಳಗ್ಗೆ 10ಗಂಟೆಗೆ ಪಾಲಿಕೆ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ಹಮ್ಮಿಕೊಂಡಿದೆ.

ಯಾವುದೇ ಕಾರಣಕ್ಕೂ ಪೌರಕಾರ್ಮಿಕರನ್ನು ಡ್ರೈನೇಜ್‌ನ ಮ್ಯಾನ್‌ಹೋಲ್‌ಗಳಿಗೆ ಇಳಿಸಿ ದುಡಿಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದರೂ, ಅವುಗಳನ್ನೆಲ್ಲ ಗಾಳಿಗೆ ತೂರಲಾಗಿದೆ. ಒಂದು ವೇಳೆ ಅಂತಹ ಸಂದರ್ಭ ಒದಗಿದರೆ ನೀರನ್ನು ಸಂಪೂರ್ಣವಾಗಿ ಬತ್ತಿಸಿ ಬಳಿಕ ಎಲ್ಲಾ ರಕ್ಷಣಾತ್ಮಕ ಕವಚಗಳೊಂದಿಗೆ ಕಾರ್ಯ ಸಾಗಬೇಕಾಗಿದೆ. ಆದರೆ ಕಾರ್ಮಿಕರನ್ನು ತೀರಾ ಹೀನಾಯವಾಗಿ ಬಳಸಿಕೊಳ್ಳಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News