ಇಸ್ಲಾಂನಲ್ಲಿ ವಧುದಕ್ಷಿಣೆಗೆ ಮಾತ್ರ ಅವಕಾಶ: ಉಡುಪಿ ಖಾಝಿ ಬೇಕಲ್ ಉಸ್ತಾದ್
ಪಡುಬಿದ್ರಿ,ಅ.21: ಇಸ್ಲಾಂ ಧರ್ಮದಲ್ಲಿ ವಧುದಕ್ಷಿಣೆಗೆ ಮಾತ್ರ ಅವಕಾಶವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಉಡುಪಿ ಖಾಝಿ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಹೇಳಿದರು.
ಅವರು ಶನಿವಾರ ಬೆಳಪುವಿನ ಟಿಪ್ಪು ಸುಲ್ತಾನ್ ವೆಲ್‍ಫೇರ್ ಅಸೋಸಿಯೇಶನ್‍ನ ವಾರ್ಷಿಕೋತ್ಸವದ ಅಂಗವಾಗಿ ಬೆಳವುವಿನ ಬದರ್ ಜಾಮಿಯಾ ಮಸೀದಿಯ ವಠಾರದಲ್ಲಿ ನಡೆದ ಮೂರು ದಿನಗಳ ಬೃಹತ್ ಕಾರ್ಯಕ್ರಮದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವರದಕ್ಷಿಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಯುವಕರ ಪಾತ್ರ ಮಹತ್ವದ್ದಾಗಿದೆ. ಪ್ರತಿಯೋರ್ವ ಯುವಕರು ವರದಕ್ಷಿಣೆ ಪಡೆದುಕೊಳ್ಳುವುದಿಲ್ಲ ಎಂದು ತಮ್ಮ ಮನಸ್ಸಿನಲ್ಲಿ ಪ್ರತಿಜ್ಞೆ ಮಾಡುವ ಮೂಲಕ ಇದಕ್ಕೆ ಕಡಿವಾಣ ಹಾಕಬಹುದು. ಯುವಕರ ಈ ಕಾರ್ಯಕ್ಕೆ ಪೋಷಕರ ಸಹಕಾರವೂ ಅಗತ್ಯ ಎಂದು ಅವರು ಹೇಳಿದ ಅವರು, ವಧುದಕ್ಷಿಣೆಯ ಬಗ್ಗೆ ಇಸ್ಲಾಂನ ಚರಿತ್ರೆಯನ್ನು ವಿವರಿಸಿದರು.
ಎರಡು ಜೋಡಿ: ಕೊಲ್ಪೆ ನೆಲ್ಯಾಡಿಯ ಅನ್ಸೀಫ್-ನಸೀಮಾ ಹಾಗೂ ದೆಂದೂರುಕಟ್ಟೆಯ ಹಮೀದ್ ಮತ್ತು ಮಲ್ಲೂರಿನ ಝೀನತ್ ಎಂಬ ಜೋಡಿಯ ವಿವಾಹವು ನಡೆಯಿತು. ಉಡುಪಿ ಖಾಝಿ ಪಿ.ಎಂ.ಇಬ್ರಾಹಿಮ್ ಬೇಕಲ ನಿಕಾಹ್ ನೆರವೇರಿಸಿದರು. ವಧುವಿಗೆ 5 ಪವನ್ ಚಿನ್ನ, ವಸ್ತ್ರಗಳು ಹಾಗೂ ವರನಿಗೆ ವಸ್ತ್ರಗಳನ್ನು ನೀಡಲಾಯಿತು. ಸಾಮೂಹಿಕ ವಿವಾಹ ನೆರವೇರಿದ ಎರಡು ಜೋಡಿಗೆ ಬೆಳಪುವಿನಲ್ಲಿ ನಿವೇಶನ ನೀಡುವುದಾಗಿ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಘೋಷಿಸಿದರು.
ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾದಾತ್ ತಂಙಳ್ ಗುರುವಾಯನಕೆರೆ, ಅಲ್ಪಸಂಖ್ಯಾತ ನಿಗಮ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಮೂಳೂರಿನ ಅಲ್‍ಇಹ್ಸಾನ್ ಎಜುಕೇಸನ್ ಸೆಂಟರ್ ಮ್ಯಾನೇಜರ್ ಯು.ಕೆ.ಮುಸ್ತಫಾ ಸಅದಿ, ಬಿಜೆಪಿ ಮುಖಂಡ ಸುರೇಶ್ ಶೆಟ್ಟಿ ಗುರ್ಮೆ, ಉದ್ಯಮಿ ರಿಝ್ವಾನ್ ಬಾಪ್‍ನಾಡ್, ಟಿಪ್ಪು ಸುಲ್ತಾನ್ ವೆಲ್‍ಫೇರ್ ಅಸೋಸಿಯೇಶನ್ ಅಧ್ಯಕ್ಷ ನವಾಝ್ ಇಬ್ರಾಹಿಂ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಚ್.ಅಬ್ದುಲ್ಲಾ, ಕಾಪು ಪರುಸಭಾ ಉಪಾಧ್ಯಕ್ಷ ಉಸ್ಮಾನ್ ಕಾಪು, ಅಂಬೇಡ್ಕರ್ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ್ ಎನ್.ಬೆಳಪು, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಮುಹಮ್ಮದ್ ಅಶ್ರಫ್ ಅಂಝದಿ, ಕಾಪು ರೋಟರಿ ಕ್ಲಬ್ ಅಧ್ಯಕ್ಷ ಝೇಬಾ ಸೆಲ್ವನ್, ಬೆಳಪು ಬದರ್ ಜಾಮಿಯಾ ಮಸೀದಿ ಅಧ್ಯಕ್ಷ ಹಾಜಿ ಕರೀಂ, ಬೆಳಪು ಮಿನಾರಾ ಜಾಮಿಯಾ ಮಸೀದಿ ಮಾಜಿ ಅಧ್ಯಕ್ಷ ಮುಶ್ತಾಕ್ ಸಾಹೇಬ್, ಮಿನಾರಾ ಮಸೀದಿ ಖತೀಬ್ ಅಬ್ದುಲ್ ಹಸನ್, ಕಾಪು ಪುರಸಭ ಸದಸ್ಯ ಇಮ್ರಾನ್, ಬೆಳಪು ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸದಕತುಲ್ಲಾ, ಉಪಸ್ಥಿತರಿದ್ದರು.
ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿದರು. ಇರ್ಶಾದ್ ಕೋಡಿ ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ, ವಿದ್ಯಾರ್ಥಿವೇತನ: ಇದೇ ಸಂದರ್ಭದಲ್ಲಿ ಬೆಳಪು ಗ್ರಾಪಂ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ, ಕರ್ನಾಟಕ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಉದ್ಯಮಿ ರಿಝ್ವಾನ್ ಬಾಪ್‍ನಾಡ್, ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ಮಿನಾರಾ ಮಸ್ಜಿದ್ ಮಾಜಿ ಖತೀಬ್ ಮೌಲಾನಾ ಕಲೀಮುಲ್ಲಾ ಸಾಹೇಬ್, ಕಳತ್ತೂರು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಶೆಟ್ಟಿ, ಬೆಳಪು ಬದ್ರಿಯಾ ಮಸ್ಜಿದ್ ಮಾಜಿ ಖತೀಬರಾದ ನಝೀರ್ ಸಅದಿ, ಉಸ್ಮಾನ್ ಮದನಿ ಇವರನ್ನು ಸನ್ಮಾನಿಸಲಾಯಿತು.
ಬಡ ಮತ್ತು ಯತೀಂ 10 ಕುಟುಂಬಗಳಿಗೆ ಕಿಟ್ ಗಳನ್ನು ವಿತರಿಸಲಾಯಿತು. ಅಲ್ಲದೆ 7, 8, 9, 10 ತರಗತಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದ 12 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.