ಪುತ್ತೂರು: ಪತ್ನಿಯನ್ನು ಕೊಲೆಗೈದವನಿಗೆ ಜೀವಾವಧಿ ಶಿಕ್ಷೆ
ಪುತ್ತೂರು,ಅ.21: ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೆ ಗ್ರಾಮದ ಬೈರಗುರಿ ಕಾಲೋನಿಯಲ್ಲಿ 2016ರ ಎಪ್ರಿಲ್ 12ರಂದು ತನ್ನ ಪತ್ನಿ ಭಾಗೀರಥಿ ಎಂಬಾಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಆಕೆಯ ಪತಿ ವಿಜಯ ಎಂಬಾತನಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಶನಿವಾರ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ.
ವಿಜಯ ತನ್ನ ಪತ್ನಿಯನ್ನು ಕೊಲೆಗೈದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಅರೋಪಿ ವಿಜಯ ಅಪರಾಧಿ ಎಂದು ಅ.16ರಂದು ಘೋಷಿಸಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶ ಎಂ. ರಾಮಚಂದ್ರರವರು ಇಂದು ಪ್ರಕಟಿಸಿದ್ದಾರೆ. ಸರಕಾರಿ ಅಭಿಯೋಜಕ ಉದಯ ಕುಮಾರ್‍ರವರು ಪ್ರಾಸಿಕ್ಯೂಶನ್ ಪರವಾಗಿ ವಾದಿಸಿದ್ದರು.
ಶಿಕ್ಷೆಯ ಪ್ರಮಾಣ:
ಸೆಕ್ಷನ್ 302ರ ಅಡಿಯಲ್ಲಿ ಅಪರಾಧಿ ವಿಜಯಗೆ ಅಜೀವ ಕಾರಾಗೃಹ ಶಿಕ್ಷೆ ಮತ್ತು ರೂ. 10 ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 6 ತಿಂಗಳ ಜೈಲು, ದಂಡ ಪಾವತಿಸಿದ್ದಲ್ಲಿ ಆತನ ಮೂವರು ಮಕ್ಕಳಿಗೆ ತಲಾ ರೂ. 3ಸಾವಿರವನ್ನು ದಂಡ ಪ್ರಕ್ರಿಯೆ ಸಂಹಿತೆ ಕಲಂ 357ರ ಎ ಅಡಿಯ ಪರಿಹಾರ ಧನ ನೀಡಬೇಕು ನ್ಯಾಯಾಲಯ ಆದೇಶಿಸಿದೆ. ಡಿಸ್ಟಿಕ್ ಲೀಗಲ್ ಸರ್ವೀಸ್ ಅಥೋರಿಟಿಸ್ (ಡಿ.ಎಲ್.ಎಸ್.ಎ) ಪ್ರಾಧಿಕಾರ 357 ಎ ಅಡಿ ಗರಿಷ್ಠ ಪ್ರಮಾಣದ ಪರಿಹಾರಧನವನ್ನು ಮಕ್ಕಳಿಗೆ ನೀಡಬೇಕು. ಈ ಪರಿಹಾರವನ್ನು ಮಕ್ಕಳನ್ನು ನೋಡಿಕೊಳ್ಳುತ್ತಿರುವ ಮೃತ ಭಾಗೀರಥಿಯ ಅಕ್ಕ ಗಿರಿಜಾ ಅವರ ಮೂಲಕ ಅರ್ಜಿ ಸಲ್ಲಿಸಿ ಹಣ ಪಡೆಯಬಹುದು. ಆರೋಪಿಗೆ ಅಜೀವ ಕಾರಗೃಹ ಶಿಕ್ಷೆ ನೀಡಿರುವುದರಿಂದ ಆರೋಪಿ ದಂಡ ಪ್ರಕ್ರಿಯೆ 428 ಅಡಿ ಯಾವುದೇ ಕ್ಷಮೆ ಅಥವಾ ಮಾಫಿಗೆ ಅರ್ಹನಿರುವುದಿಲ್ಲ ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.
ಘಟನೆ ವಿವರ:
12-4-2016 ರಂದು ಮುಂಡೂರು ಗ್ರಾ.ಪಂ. ವ್ಯಾಪ್ತಿಯ ಸರ್ವೆ ಗ್ರಾಮದ ಬೈರಗುರಿ ಕಾಲೋನಿಯಲ್ಲಿರುವ ತನ್ನ ಮನೆಯಲ್ಲಿ ಪತ್ನಿ ಭಾಗೀರಥಿ(31) ಎಂಬವರನ್ನು ಕೊಲೆ ನಡೆಸಿದ ಆರೋಪದಲ್ಲಿ ವಿಜಯ(35) ಅವರನ್ನು ಎಪ್ರಿಲ್ 13ರಂದು ಬಂಧಿಸಿದ್ದರು. ದಂಪತಿಗಳಿಬ್ಬರೂ ಮದ್ಯ ಸೇವಿಸುವ ಚಟದವರಾಗಿದ್ದು ಪ್ರತಿ ರಾತ್ರಿ ಪರಸ್ಪರ ಜಗಳಾಡುತ್ತಿದ್ದರು ಎನ್ನಲಾಗಿದ್ದು, ಎ. 12ರಂದು ರಾತ್ರಿ ವೇಳೆಯೂ ಇವರ ನಡುವೆ ಎಂದಿನಂತೆ ಜಗಳ ನಡೆದಿತ್ತು. ಈ ವೇಳೆ ವಿಜಯ ಮನೆಯಲ್ಲಿದ್ದ ಕತ್ತಿಯಿಂದ ಪತ್ನಿಯ ಕುತ್ತಿಗೆಗೆ ಕಡಿದಿದ್ದ. ಕತ್ತಿಯೇಟಿಗೆ ತೀವ್ರ ಗಾಯಗೊಂಡ ಭಾಗೀರಥಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಮರುದಿನ ಪ್ರಕರಣ ಸ್ಥಳೀಯರಿಂದ ಬಹಿರಂಗಗೊಂಡಿತ್ತು. ಈ ಮಾಹಿತಿಯಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪೊಲೀಸರ ವಿಚಾರಣೆಯ ವೇಳೆ ಆರೋಪಿ ವಿಜಯ ತಾನು ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದ. ಮೃತರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯಿದ್ದು ಈ ಮೂವರು ಮಕ್ಕಳೂ ಪುತ್ತೂರು ಸಂಜಯನಗರದಲ್ಲಿರುವ ತಮ್ಮ ದೊಡ್ಡಮ್ಮನ ಮನೆಯಲ್ಲಿ ವಾಸ್ತವ್ಯವಿದ್ದು ಅಲ್ಲಿಂದಲೇ ಶಾಲೆಗೆ ಹೋಗುತ್ತಿದ್ದಾರೆ. ಘಟನೆ ನಡೆಯುವ ಸಂದರ್ಭದಲ್ಲಿ ಮನೆಯಲ್ಲಿ ಪತಿ ಮತ್ತು ಪತ್ನಿ ಮಾತ್ರ ಇದ್ದರು.
ಕೊಲೆ ನಡೆಸಿದ ಆರೋಪಿ ವಿಜಯ್‍ನನ್ನು ಸಂಪ್ಯ ಪೊಲೀಸರು ಎ.13ರಂದು ರಾತ್ರಿ ವೇಳೆ ಬಂಧಿಸಿದ್ದು ಎ.14ರಂದು ಸ್ಥಳ ಮಹಜರು ನಡೆಸಿದ್ದರು. ಮೃತ ಭಾಗೀರಥಿಯವರ ಸಹೋದರ ವಸಂತ ಎಂಬವರು ನೀಡಿದ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸು ದಾಖಲಾಗಿತ್ತು. ಕೊಲೆ ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಕೊಲೆ ಕೃತ್ಯಕ್ಕೆ ಬಳಸಲಾಗಿದ್ದ ಕತ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಪುತ್ತೂರು ಎಎಸ್ಪಿ ಆಗಿದ್ದ ರಿಷ್ಯಂತ್ ಸಿ.ಬಿ, ಗ್ರಾಮಾಂತರ ಸರ್ಕಲ್ ಇನ್ಸ್‍ಪೆಕ್ಟರ್ ಅನಿಲ್ ಎಸ್. ಕುಲಕರ್ಣಿ, ಸಂಪ್ಯ ಠಾಣಾ ಎಎಸ್ಸೈ ಆಗಿದ್ದ ಚೆಲುವಯ್ಯರವರ ನೇತೃತ್ವದಲ್ಲಿ ವಿಚಾರಣೆ ನಡೆದು ಆರೋಪಿ ವಿಜಯ್ ವಿರುದ್ಧ ಪೊಲೀಸರು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಚಾರ್ಚ್‍ಶೀಟ್ ಸಲ್ಲಿಸಿದ್ದರು.
ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸರಕಾರಿ ಅಭಿಯೋಜಕ ಉದಯ ಕುಮಾರ್ ಮತ್ತು ಆರೋಪಿ ಪರ ವಕೀಲರ ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶ ಎಂ. ರಾಮಚಂದ್ರರವರು ಆರೋಪಿ ವಿಜಯನು ತನ್ನ ಪತ್ನಿಯನ್ನು ಕೊಲೆ ಮಾಡಿರುವುದು ಸಾಬೀತು ಮಾಡಲಾಗಿದೆ ಎಂದು ಅ.16ರಂದು ಘೋಷಣೆ ಮಾಡಿದ್ದರು. ಅ.17ರಂದು ಆತನಿಗೆ ಶಿಕ್ಷೆಯ ಪ್ರಮಾಣ ಘೋಷಿಸುವುದಾಗಿ ತಿಳಿಸಿದ್ದರು. ಬಳಿಕ ಶಿಕ್ಷೆಯ ಪ್ರಮಾಣ ಘೋಷಣೆ ಮುಂದುವರಿದು ಅ.21ಕ್ಕೆ ಶಿಕ್ಷೆಯ ಪ್ರಮಾಣ ಘೋಷಣೆ ಮಾಡಿದ್ದಾರೆ.