ದೇಶದ ಅಖಂಡತೆ, ಪ್ರಜಾಪ್ರಭುತ್ವವನ್ನು ವಿಭಜಿಸಲು ಬಿಜೆಪಿ-ಆರೆಸ್ಸೆಸ್ ಹುನ್ನಾರ :ಸಿಪಿಐ ನಾಯಕ ಡಿ.ರಾಜಾ ಆರೋಪ

Update: 2017-10-21 14:14 GMT

ಉಪ್ಪಳ,ಅ.21 :ದೇಶದ ಅಖಂಡತೆ, ಪ್ರಜಾಪ್ರಭುತ್ವವನ್ನು ವಿಭಜಿಸಿ ಹಿಂದೂ ರಾಷ್ಟ್ರವನ್ನಾಗಿಸಲು ಬಿಜೆಪಿ -ಆರೆಸ್ಸೆಸ್  ಹುನ್ನಾರ ನಡೆಸುತ್ತಿದೆ ಎಂದು ಸಿಪಿಐ ರಾಷ್ಟ್ರೀಯ ನಾಯಕ ಡಿ.ರಾಜಾ ಅಭಿಪ್ರಾಯಪಟ್ಟರು.

ಅವರು ಶನಿವಾರ ಸಂಜೆ ಉಪ್ಪಳದಲ್ಲಿ ಸಿ.ಪಿ.ಎಂ ರಾಜ್ಯ ಕಾರ್ಯದರ್ಶಿ ಕೋಡಿಯೇರಿ ಬಾಲಕೃಷ್ಣನ್ ನೇತೃತ್ವದ ಎಲ್ ಡಿ ಎಫ್  ಕೇರಳ ರಾಜ್ಯ ಮಟ್ಟದ ಜನಾಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ನರೇಂದ್ರ ಮೋದಿ ನೇತೃತ್ವದ ಸರಕಾರದಿಂದ ಜನತೆಗೆ ರಕ್ಷಣೆ ಇಲ್ಲದಂತಾಗಿದೆ. ಅಲ್ಪಸಂಖ್ಯಾತರು, ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಿದೆ. ಬದುಕುವ ಸ್ವಾತಂತ್ರ್ಯವನ್ನು ಕಸಿಯತೊಡಗಿದೆ. 'ಸಬ್ ಕಾ ಸಾತ್ - ಸಬ್ ಕಾ ವಿಕಾಸ್' ಎಂದು ಅಧಿಕಾರಕ್ಕೇರಿದ ಮೋದಿ ಸರಕಾರ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ  ನೀಡಿದರೂ  ಒಬ್ಬರಿಗೂ ಉದ್ಯೋಗ ನೀಡಲು ಸಾಧ್ಯವಾಗಿಲ್ಲ. 

ಅಧಿಕಾರಕ್ಕೆ ಬಂದಲ್ಲಿ  ಸ್ವಿಸ್  ಬ್ಯಾಂಕ್ ನಲ್ಲಿರುವ ಕಾಲ ಧನವನ್ನು ತಂದು ಪ್ರತಿಯೋರ್ವರ ಬ್ಯಾಂಕ್ ಖಾತೆಗೆ 15 ಲಕ್ಷ   ಜಮಾ ಮಾಡುವುದಾಗಿ ಭರವಸೆ ನೀಡಿದ್ದ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಜನತೆಯನ್ನು ಮರೆತಿದ್ದಾರೆ. ಜನತೆಯನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ಲೇವಡಿ ಮಾಡಿದರು .
ಕೃಷಿಕರ, ಬಡವರ, ದಲಿತರ, ಸಾಮಾನ್ಯ ಜನರ ಪರ ಇರಬೇಕಾದ ಕೇಂದ್ರ ಸರಕಾರ  ಅಂಬಾನಿ, ಅದಾನಿ, ಬಿರ್ಲಾ, ಟಾಟಾ ಹಾಗೂ ಉದ್ಯಮಿಗಳ ಸರಕಾರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ದೇಶವನ್ನು ವಿಭಜಿಸಲು  ಹೊರಟಿದ್ದು,1992ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ಬಿಜೆಪಿ - ಸಂಘ ಪರಿವಾರ ಈಗ ತಾಜ್ ಮಹಲನ್ನು ಕೆಡವಲು ಮುಂದಾಗುತ್ತಿದೆ. ಪ್ರಜಾಪ್ರಭುತ್ವದ ಕೊಲೆ  ನಡೆಯುತ್ತಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ಕೇರಳದಲ್ಲಿ ಕೆಲ ದಿನಗಳ ಹಿಂದೆ ಜನ ಸಂರಕ್ಷಣಾ ಯಾತ್ರೆ   ನಡೆಯಿತು. ಉತ್ತರಪ್ರದೇಶ, ಮಧ್ಯಪ್ರದೇಶ, ಗೋವಾ ಮುಖ್ಯಮಂತ್ರಿಗಳು, ಹಲವು ಸಚಿವರು , ಬಿಜೆಪಿಯ ಮುಖಂಡರು ಕೇರಳಕ್ಕೆ ಬಂದು ಯಾತ್ರೆ ನಡೆಸಿದರು. ಆದರೆ ಯಾತ್ರೆ ನಡೆಸಬೇಕಾದುದು ಕೇರಳದಲ್ಲಿ ಅಲ್ಲ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ.ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಜನತೆ ಸಂರಕ್ಷಣೆಗೆ ಒತ್ತಾಯಿಸುತ್ತಿದ್ದಾರೆ. ಕೇರಳದಲ್ಲಿ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದು ಹೇಳಿದ ಅವರು,ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನೂರಾರು ಶಿಶುಗಳ ಮರಣ  ಮರೆಯಲಾಗದ್ದು , ಇದರ ಜೊತೆಗೆ ದಲಿತರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮುಖ್ಯಮಂತ್ರಿ ಆದಿತ್ಯನಾಥ್ ಗೆ ಕಾಣುತ್ತಿಲ್ಲವೇ. ನೆಮ್ಮದಿಯಿಂದ ಬದುಕುವ ಕೇರಳದಂತಹ ರಾಜ್ಯಗಳಲ್ಲಿ ಗಲಭೆ  ಉಂಟುಮಾಡಲು  ಇಂತಹ ಮುಖಂಡರು ಕೇರಳಕ್ಕೆ ತಲುಪಿದ್ದಾಗಿ ಅಭಿಪ್ರಾಯಪಟ್ಟರು.

ಕೇರಳ ಸಚಿವರಾದ ಇ. ಚಂದ್ರಶೇಖರನ್ , ಕಡನ್ನಪಳ್ಳಿ ರಾಮಚಂದ್ರನ್, ಸಂಸದ ಪಿ.ಕರುಣಾಕರನ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಪಿ.ಸತೀಷ್ಚಂದ್ರನ್,  ಸಿಪಿಐ ಮುಖಂಡ ಬಿ.ವಿ ರಾಜನ್, ಎಂ.ವಿ ಗೋವಿಂದನ್ ಮಾಸ್ಟರ್, ವಿ.ಪಿ.ಪಿ  ಮುಸ್ತಪಾ,  ಕೆ .ಆರ್ ಜಯಾನಂದ, ಮಾಜಿ ಸಚಿವ ಎ.ಕೆ ಶಶೀ೦ದ್ರನ್,  ಮಾಜಿ ಶಾಸಕ ಸಿ.ಎಚ್ ಕುಞ೦ಬು,  ಎ.ಅಬೂಬಕ್ಕರ್, ಅಬ್ದುಲ್ ರಝಾಕ್  ಚಿಪ್ಪಾರ್,  ಟಿ.ಕೃಷ್ಣನ್, ಅಜೀಜ್ ಕಡಪ್ಪುರ, ಬೇಬಿ ಶೆಟ್ಟಿ  ಮೊದಲಾದವರು  ಉಪಸ್ಥಿತರಿದ್ದರು.ಜಾಥಾ ನವಂಬರ್ ಮೂರರಂದು ತ್ರಿಶೂರಿನಲ್ಲಿ ಕೊನೆಗೊಳ್ಳಲಿದೆ.

ಕೇಂದ್ರ ಸರಕಾರದ  ಜನವಿರೋಧಿ ನೀತಿ , ಕೊಮುವಾದ , ಕೇರಳ ಸರಕರಾದ  ವಿರುದ್ಧ ಬಿಜೆಪಿ -ಯು ಡಿ ಎಫ್  ನ  ಅಪಪ್ರಚಾರ ವಿರುದ್ದ ಎಲ್ ಡಿ ಎಫ್   ನಿಂದ  ರಾಜ್ಯ  ಮಟ್ಟದ ಜಾಥಾ ಹಮ್ಮಿಕೊಂಡಿದ್ದು , ಉತ್ತರ  ವಲಯ ಜಾಥಾಕ್ಕೆ  ಕೊಡಿಯೇರಿ ಬಾಲಕೃಷ್ಣನ್ ನೇತೃತ್ವ ನೀಡಿದ್ದು , ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ನೇತೃತ್ವದ  ದಕ್ಷಿಣ ವಲಯ  ಜಾಥಾಕ್ಕೆ  ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News