×
Ad

ತೃತೀಯ ಭಾಷೆಯಾಗಿ ‘ತುಳು’ 200 ಶಾಲೆಗಳಿಗೆ ವಿಸ್ತರಣೆ: ಎ.ಸಿ.ಭಂಡಾರಿ

Update: 2017-10-21 20:06 IST

ಮಂಗಳೂರು, ಅ. 21: ರಾಜ್ಯ ಸರಕಾರವು ದ.ಕ.ಹಾಗೂ ಉಡುಪಿ ಜಿಲ್ಲೆಗಳಲ್ಲಿ ತೃತೀಯ ಭಾಷೆಯಾಗಿ ತುಳು ಪಠ್ಯಕ್ಕೆ ಅವಕಾಶ ನೀಡಿದೆ. ಇದೀಗ 35 ಶಾಲೆಗಳಲ್ಲಿ 1,647 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮುಂದಿನ ಶೈಕ್ಷಣಿಕ ಸಾಲಿನಿಂದ ತುಳುವನ್ನು 200 ಶಾಲೆಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ತಿಳಿಸಿದರು.

ನಗರದ ತುಳುಭವನದಲ್ಲಿ ಅಕಾಡಮಿಯ ವತಿಯಿಂದ ಶನಿವಾರ ಆಯೋಜಿಸಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ತೃತೀಯ ಭಾಷೆಯಾಗಿ ತುಳುಪಠ್ಯ ಅನುಷ್ಠಾನ ಕುರಿತು ತುಳು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತುಳು ಭಾಷೆಯ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ 8 ಉಪಸಮಿತಿಗಳನ್ನು ರಚಿಸಲಾಗಿದೆ. ಶಾಲೆಗಳಲ್ಲಿ ತುಳು ಪಠ್ಯದ ಆರಂಭಕ್ಕೆ ಮುಖ್ಯಶಿಕ್ಷಕರ ಮನವೊಲಿಸುವ ಕಾರ್ಯದಲ್ಲಿ ತುಳುಪರ ಸಂಘಟನೆಗಳು ಸಹಕಾರ ನೀಡಬೇಕು ಎಂದು ಎ.ಸಿ.ಭಂಡಾರಿ ಮನವಿ ಮಾಡಿದರು.

ತುಳುಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಮಾತನಾಡಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತುಳು ಕಲಿಯಲು ಆಸಕ್ತಿ ಇದ್ದರೂ, ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ನಿರ್ಲಕ್ಷತಾಳುತ್ತಿವೆ. ಹೀಗಾಗಿ ತುಳುಸಂಘಟನೆಗಳ ಸಹಕಾರದಿಂದ ಅಕಾಡಮಿಯು ಶಾಲೆಗಳನ್ನು ಸಂಪರ್ಕಿಸಿ ಮನವೊಲಿಸುವ ಅಭಿಯಾನ ನಡೆಸಬೇಕಿದೆ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಸರಕಾರವು 2010ರಲ್ಲಿ ತುಳು ಪಠ್ಯಕ್ಕೆ ಅವಕಾಶ ನೀಡಿದೆ. ಇದೀಗ ಉಭಯ ಜಿಲ್ಲೆಗಳ 35 ಶಾಲೆಗಳಲ್ಲಿ ತುಳು ಕಲಿಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕೇವಲ 2 ಶಾಲೆಗಳಲ್ಲಿ ಮಾತ್ರ ತುಳು ಪಠ್ಯವಿದೆ. ಕಳೆದ ಸಾಲಿನ ಎಸ್ಸೆಸೆಲ್ಸಿಯ ತುಳು ವಿಷಯದಲ್ಲಿ ಪರೀಕ್ಷೆ ಬರೆದ 283ರಲ್ಲಿ 42 ಮಂದಿ ನೂರಕ್ಕೆ ನೂರು ಅಂಕಗಳಿಸಿದ್ದಾರೆ ಎಂದರು.

►ತುಳು ಪಠ್ಯವನ್ನು ಹೆಚ್ಚು ಶಾಲೆಗಳಲ್ಲಿ ಅಳವಡಿಸುವ ನಿಟ್ಟಿನಲ್ಲಿ ತುಳು ಅಕಾಡಮಿ, ಉಪ ಸಮಿತಿ ಹಾಗೂ ತುಳುಪರ ಸಂಘಟನೆಗಳ ಪ್ರಮುಖರ ನಿಯೋಗ ಶಿಕ್ಷಣ ಇಲಾಖೆಯ ಡಿಡಿಪಿಐ ಅವರ ಸಹಕಾರದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಕೆಲವು ಶಾಲೆಗಳಿಗೆ ಭೇಟಿ ನೀಡಿ ಮುಖ್ಯಶಿಕ್ಷಕರು ಹಾಗೂ ಆಡಳಿತ ಸಮಿತಿಯ ಮನವೊಲಿಸುವ ಕಾರ್ಯವನ್ನು ನಡೆಸುವ ನಿರ್ಣಯವೊಂದನ್ನು ಕೈಗೊಳ್ಳಲಾಯಿತು.

ಅಕಾಡಮಿು ಉಪಸಮಿತಿಯ ಸಂಚಾಲಕ ಪ್ರಭಾಕರ ನೀರುಮಾರ್ಗ ಸ್ವಾಗತಿಸಿದರು. ಮಾಜಿ ಸದಸ್ಯ ಯಾದವ ಕರ್ಕೇರ ವಂದಿಸಿದರು. ಸದಸ್ಯೆ ಸುಧಾ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News