×
Ad

ಮಂಗಳೂರು: ಪೊಲೀಸ್ ಹುತಾತ್ಮ ದಿನಾಚರಣೆ

Update: 2017-10-21 20:48 IST

ಮಂಗಳೂರು, ಅ.21: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ಮತ್ತು ದ.ಕ ಜಿಲ್ಲಾ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ದ.ಕ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ಶನಿವಾರ ಪೊಲೀಸ್ ಹುತಾತ್ಮ ದಿನಾಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಎಸ್. ದೇಶದ ಆಡಳಿತ ವ್ಯವಸ್ಥೆಯಲ್ಲಿ ಪೊಲೀಸ್ ಇಲಾಖೆಯು ಆಧಾರಸ್ತಂಭವಾಗಿದೆ. ಈ ಸೇವೆಯಲ್ಲಿ ಅದೆಷ್ಟೋ ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ. ಅಂತಹವರನ್ನು ನೆನಪಿಸಿ ಅವರಿಗೆ ನಮನ ಸಲ್ಲಿಸುವ ಕೆಲಸ ಪೊಲೀಸ್ ಹುತಾತ್ಮ ದಿನಾಚರಣೆ ಮೂಲಕ ನಡೆಯುತ್ತಿದೆ ಎಂದರು.

ಈವರೆಗೆ 34,418 ಪೊಲೀಸ್ ಸಿಬ್ಬಂದಿ ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಾಣತ್ಯಾಗ ಮಾಡಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಈವರೆಗೆ 383 ಮಂದಿ ಪೊಲೀಸರು ದೇಶಸೇವೆಗಾಗಿ ತಮ್ಮ ಪ್ರಾಣ ಮುಡಿಪಾಗಿಟ್ಟಿದ್ದಾರೆ ಎಂದ, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ದ.ಕ. ಜಿಲ್ಲೆಯಲ್ಲಿ ಸಾಕಷ್ಟು ಸವಾಲುಗಳಿವೆ. ಅಮಾಯಕರು ಮತ್ತು ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ನೀಡುವ ಪ್ರಾಮಾಣಿಕ ಸೇವೆಯನ್ನು ಮಾಡಬೇಕಿದೆ ಎಂದರು.

ಪೊಲೀಸ್ ಅಧೀಕ್ಷಕ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್. ಮಾತನಾಡಿ, 1959ರಲ್ಲಿ ಚೀನಾ ಗಡಿ ಕಾಯುವ ಸಮಯದಲ್ಲಿ 10 ಮಂದಿ ಪೊಲೀಸರು ಪ್ರಾಣ ತ್ಯಾಗ ಅರ್ಪಿಸಿದಾಗಿನಿಂದ ಪ್ರತಿ ವರ್ಷ ಅ.21ರಂದು ಹುತಾತ್ಮ ಪೊಲೀಸರಿಗೆ ನಮನ ಸಲ್ಲಿಸಲಾಗುತ್ತಿದೆ ಎಂದರು.

ಈ ಸಂದರ್ಭ ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಹೇಮಂತ್ ನಿಂಬಾಳ್ಕರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಹುತಾತ್ಮರಾದ ಪೊಲೀಸರ ಹೆಸರು ವಾಚಿಸಿದ ಇನ್‌ಸ್ಪೆಕ್ಟರ್ ನೇತೃತ್ವದ ಪೊಲೀಸ್ ಮೀಸಲು ಪಡೆ ಮತ್ತು ಶಸಸ ಮೀಸಲು ಪಡೆಯಿಂದ ಮೂರು ಸುತ್ತು ಕುಶಾಲತೋಪು ಹಾರಿಸಿ ಗೌರವ ಅರ್ಪಿಸಲಾಯಿತು.

ಹುತಾತ್ಮ ಪೊಲೀಸ್ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ಸಂಚಾರ ವಿಭಾಗದ ಎಎಸ್ಸೈ ಹರಿಶ್ಚಂದ್ರ ಬೈಕಂಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News