ಗಾಂಜಾ ಸಾಗಾಟ ಮತ್ತು ಸೇವನೆ ಆರೋಪ: 7 ಮಂದಿಯ ಸೆರೆ
ಮಂಗಳೂರು, ಅ.21: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನೀರುಮಾರ್ಗ, ತಣ್ಣೀರುಬಾವಿ, ಪಚ್ಚನಾಡಿ ಮತ್ತಿತರ ಕಡೆ ಗಾಂಜಾ ಸಾಗಾಟ ಮತ್ತು ಸೇವನೆ ಮಾಡುತ್ತಿದ್ದ ಆರೋಪದ ಮೇಲೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನೀರುಮಾರ್ಗ ಒಳಬೈಲು ನಿವಾಸಿ ಮುಹಮ್ಮದ್ ರಿಯಾಝ್ (24), ಉರ್ವದ ನಾಗಭೂಷಣ್ (30), ಕೊಟ್ಟಾರ ಚೌಕಿಯ ಹರ್ಷ ಪೈಲೂರು (24), ಲೇಡಿಹಿಲ್‌ನ ಗಗನ್ (24), ಉರ್ವ ಮಾರಿಗುಡಿ ಸಮೀಪದ ಕೃಷ್ಣರಾಜ್ (25), ವಾಮಂಜೂರು ಜ್ಯೋತಿ ನಗರದ ಭಾಸ್ಕರ್ ಪೂಜಾರಿ (32), ಮೂಡುಶೆಡ್ಡೆ ಶಿವನಗರದ ಶಲಕ್‌ರಾಜ್(25) ಬಂಧಿತ ಆರೋಪಿಗಳು.
ನೀರುಮಾರ್ಗ ಒಳಬೈಲು ಸಮೀಪವಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಮುಹಮ್ಮದ್ ರಿಯಾಝ್‌ನನ್ನು ಬಂಧಿಸಿದ್ದಾರೆ.
ಆರೋಪಿಯಿಂದ 250 ಗ್ರಾಂ ಗಾಂಜಾ, ಬಜಾಜ್ ಪಲ್ಸರ್ ಬೈಕ್ ಹಾಗೂ ಮೊಬೈಲ್ ಪೋನ್‌ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ವೌಲ್ಯ 36,000 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಯು ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೇಟ್‌ಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಮುಂದಿನ ಕ್ರಮಕ್ಕಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಆರೋಪಿಯನ್ನು ಹಸ್ತಾಂತರಿಸಲಾಗಿದೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಬಾವಿ ಬೀಚ್‌ನಲ್ಲಿ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪಚ್ಚನಾಡಿ ಜ್ಯೋತಿನಗರದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯಂತೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಗಾಂಜಾ ಸೇವನೆ ಮಾಡುತ್ತಿದ್ದ ನಾಗಭೂಷಣ್, ಹರ್ಷ ಪೈಲೂರು, ಗಗನ್, ಕೃಷ್ಣರಾಜ್, ಭಾಸ್ಕರ್ ಪೂಜಾರಿ, ಶಲಕ್‌ರಾಜ್‌ರನ್ನು ಬಂಧಿಸಿದ್ದಾರೆ.
ಯುವಕರೆಲ್ಲರೂ ಗಾಂಜಾ ಸೇವನೆ ಮಾಡುವ ಉದ್ದೇಶದಿಂದಲೇ ತಣ್ಣೀರುಬಾವಿ ಬೀಚ್ ಹಾಗೂ ಪಚ್ಚನಾಡಿ ಜ್ಯೋತಿನಗರದ ಖಾಲಿ ಜಾಗದಲ್ಲಿ ನಿಂತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಂಜಾ ಸೇವನೆ ಮಾಡಿದ ಯುವಕರ ಪೋಷಕರನ್ನು ಸಿಸಿಬಿ ಕಚೇರಿಗೆ ಕರೆಸಿಕೊಂಡ ಪೊಲೀಸರು ಯುವಕರ ಮೇಲೆ ನಿಗಾಯಿರಿಸುವಂತೆ ಸೂಚಿಸಿದ್ದಾರೆ.ಆರೋಪಿಗಳನ್ನು ಪಣಂಬೂರು ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಲಾಗಿದೆ.
ಪೊಲೀಸ್ ಕಮೀಷನರ್ ಟಿ. ಆರ್. ಸುರೇಶ್‌ರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥಾ ವಿಭಾಗದ ಡಿಸಿಪಿ ಹನುಮಂತರಾಯ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಪತ್ತೆಕಾರ್ಯದಲ್ಲಿ ಪಾಲ್ಗೊಂಡಿದ್ದರು.